ಪಹಲ್ಗಾಮ್ ದಾಳಿಯ ಬಳಿಕ ಭಾರತ ಸೇನೆ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ‘ಆಪರೇಷನ್ ಸಿಂಧೂರ’ದ ವಿರುದ್ಧ ಪ್ರತೀಕಾರ ತೀರಿಸಿಕೊಳಳಲು ಉಗ್ರ ಸಂಘಟನೆ ಅಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಖಂಡ (AQIS) ಭಾರತದ ವಿರುದ್ಧ ಜಿಹಾದ್ ಘೋಷಿಸಿದೆ ಎಂದು ವರದಿಯಾಗಿದೆ. ಈ ಉಗ್ರ ಸಂಘಟನೆ ಜೊತೆಗೆ ಟಿಟಿಪಿ (ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್) ಕೂಡ ಕೈಜೋಡಿಸಿದೆ. ಇನ್ನೂ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಭಯೋತ್ಪಾದಕ ಸಂಘಟನೆಗಳು ಧಾರ್ಮಿಕ ಯುದ್ಧ (ಜಿಹಾದ್) ಎಂದು ಕರೆದಿದೆ. (ಜಿಹಾದ್ ಎಂದರೆ ಧರ್ಮವನ್ನು ಉಳಿಸಿಕೊಳ್ಳಲು ನಡೆಸುವ ಯುದ್ಧ ಅಥವಾ ಹೋರಾಟ ಎಂದರ್ಥ.)
ಆಪರೇಷನ್ ಸಿಂಧೂರ – ಮುಗ್ದ ಮುಸಲ್ಮಾನರ ಹತ್ಯೆ ಎಂದ ಉಗ್ರರು
ಉಗ್ರರ ವಿರುದ್ಧ ಭಾರತ ತೆಗೆದುಕೊಂಡ ಕ್ರಮವನ್ನು ಮುಗ್ಧ ಮುಸ್ಲಿಮರನ್ನು ಹತ್ಯೆ ಎಂದು ಉಗ್ರ ಸಂಘಟನೆಗಳು ಹೇಳಿಕೊಂಡಿವೆ. ಈ ಮೂಲಕ ಭಾರತ, ಪಾಕಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಜನರ ದಾರಿತಪ್ಪಿಸಲು ಮುಂದಾಗಿವೆ.
ಭಾರತ ದಾಳಿ ನಡೆಸಿದ ಸ್ಥಳಗಳಲ್ಲಿ ಮದರಸಾಗಳು ಮತ್ತು ಮಸೀದಿಗಳ ಹೆಸರಿನಲ್ಲಿ ಭಯೋತ್ಪಾದಕರನ್ನು ಉಗ್ರ ಸಂಘಟನೆಗಳು ಉಗ್ರರನ್ನು ತಯಾರು ಮಾಡುತ್ತಿವೆ. ಸುಮಾರು 2008ರಿಂದ ಈ ಕೆಲಸವನ್ನು ಉಗ್ರ ಸಂಘಟನೆಗಳು ಮಾಡುತ್ತಿವೆ. ಈ ಬಗ್ಗೆ ಭಾರತ ಸಹ ಸೂಕ್ತ ಸಾಕ್ಷಿಗಳನ್ನು ಸಂಗ್ರಹಿಸಿ, ದಾಳಿ ನಡೆಸಿದೆ. ಆದರೆ ಉಗ್ರರು ಮಾತ್ರ ಅವುಗಳು ಧಾರ್ಮಿಕ ಸ್ಥಳಗಳು ಎಂದು ಹೇಳಿಕೊಂಡಿವೆ. ಇದಕ್ಕೆ ಪೂರಕವಾಗಿ ಪಾಕ್‌ನ ರಕ್ಷಣಾ ಸಚಿವ ಖಾವಾಸಾ ಆಸಿಫ್ ಉಗ್ರರು ಈಗ ಬದಲಾಗಿ ಧಾರ್ಮಿಕ ಮುಖಂಡರಾಗಿ ಪರಿವರ್ತನೆ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದ.
ಉಗ್ರರ ನೇಮಕಾತಿ
AQIS ಭಯೋತ್ಪಾದಕ ಸಂಘಟನೆ ಜಾಗತಿಕ ಮುಸ್ಲಿಂ ಸಮುದಾಯದ ಮತ್ತು ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಯ ರಕ್ಷಕಣೆಗಾಗಿ ಇದೆ ಎಂದು ಘೋಷಿಸಿಕೊಂಡಿದೆ. ಇದಕ್ಕಾಗಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮರನ್ನು ತನ್ನ ಅಭಿಯಾನಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಧರ್ಮದ ಹೆಸರಿನಲ್ಲಿ ಸುಲಭವಾಗಿ ಕೆರಳಬಹುದಾದ ಯುವ ಮತ್ತು ಬಡ ಮುಸ್ಲಿಂ ಯುವಕರ ಉಗ್ರ ಸಂಘಟನೆಗಳ ಟಾರ್ಗೆಟ್ ಆಗಿದೆ.
ಮುಸ್ಲಿಂ ರಾಷ್ಟ್ರಗಳಾದ ಸೌದಿ, ಟರ್ಕಿ ಮತ್ತು ಇತರ ಶ್ರೀಮಂತ ಇಸ್ಲಾಮಿಕ್ ರಾಷ್ಟ್ರಗಳು ಈ AQIC ಉಗ್ರ ಸಂಘಟನೆಯನ್ನು ನಿಷೇಧಿಸಿವೆ. ಇದಲ್ಲದೆ, ಅಮೆರಿಕ ಈಗಾಗಲೇ ಇದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಉಗ್ರರ ಪ್ಲ್ಯಾನ್ ಏನು?
ಉಗ್ರ ಸಂಘಟನೆಗಳು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಮತ್ತು ಭಾರತವನ್ನು ಆಕ್ರಮಣಕಾರಿ ಎಂದು ಬಿಂಬಿಸಲು ಮುಂದಾಗಿವೆ. ಈ ವಿಚಾರಗಳನ್ನು ಕರಪತ್ರಗಳು ಮತ್ತು ವೀಡಿಯೊಗಳನ್ನು ಮಾಡಿ ಹಂಚುತ್ತಿವೆ. ಈ ಮೂಲಕ ಭಾರತದ ದಾಳಿಯನ್ನು ಬಡ ಮುಸ್ಲಿಮರ ಮೇಲಿನ ಕಿರುಕುಳ ಎಂದು ಬಿಂಬಿಸಲು ಉಗ್ರ ಸಂಘಟನೆಗಳು ಮುಂದಾಗಿವೆ. ಇದರಿಂದ ಭಾವನಾತ್ಮಕವಾಗಿ ಯುವಕರನ್ನು ಸೆಳೆಯುವುದು ಉಗ್ರ ಸಂಘಟನೆಗಳ ತಂತ್ರವಾಗಿದೆ.
ಮುಸ್ಲಿಮರನ್ನು ದಾರಿತಪ್ಪಿಸುವ ಪ್ರಯತ್ನ
AQIS ನಿರ್ದಿಷ್ಟವಾಗಿ ಭಾರತದ ಮೇಲೆ ಮುಸ್ಲಿಮರಿಗೆ ಹಿಂದೂಗಳ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿ, ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆ ಮತ್ತು ಇಸ್ಲಾಂನ ಗೌರವವನ್ನು ರಕ್ಷಿಸಿದವರನ್ನು AQIS ಶ್ಲಾಘಿಸಿದೆ. ಇನ್ನೂ ಜಿಹಾದಿ ನಾಯಕತ್ವದ ಅಡಿಯಲ್ಲಿ ಜಾಗತಿಕ ಉಮ್ಮಾ (ಜಾಗತಿಕ ಸಮುದಾಯ)ದ ಧ್ವಜವನ್ನು ಒಪ್ಪಿಕೊಳ್ಳುವಂತೆ ಅದು ಒತ್ತಾಯಿಸಿದೆ.
ಭಾರತಕ್ಕೆ ಇದು ಎಷ್ಟು ಅಪಾಯಕಾರಿ?
AQISನ ಈ ಬೆಳವಣಿಗೆ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯಾಕೆಂದರೆ ಉಗ್ರರು, ಡಿಜಿಟಲ್ ಪ್ರಚಾರ, ಸಾಮಾಜಿಕ ಮಾಧ್ಯಮ ಜಾಲಗಳು ಮತ್ತು ಮೂಲಭೂತವಾದಿ ವ್ಯಕ್ತಿಗಳೊಂದಿಗೆ ರಹಸ್ಯ ಸಂಪರ್ಕಗಳ ಮೂಲಕ ಸೈದ್ಧಾಂತಿಕ ಆಕ್ರಮಣ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಭಾರತ ಸರ್ಕಾರ ಅಂತಹ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಂದ್ ಮಾಡಿದರೂ, ಹೊಸ ಖಾತೆಗಳನ್ನು ತೆರೆದು ಇಂತಹ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಇಂತಹ ಜಾಲಕ್ಕೆ ಸಿಲುಕಿ ಭಾರತದ ಸೂಕ್ಷ್ಮ ಮಾಹಿತಿಯನ್ನು ಪಾಕ್‌ಗೆ ನೀಡಿದ ಹಲವರನ್ನು ಇತ್ತೀಚೆಗೆ ಭಾರತದಲ್ಲಿ ಬಂಧಿಸಲಾಗಿದೆ.
ಉಗ್ರರಿಗೆ ಪಾಕ್ ಸೇನೆಯ ಸವಲತ್ತು
AQIS ಭಯೋತ್ಪಾದಕ ಸಂಘಟನೆಯ ಮುಂದಾಳತ್ವವನ್ನು ಉಗ್ರ ಒಸಾಮಾ ಮಹಮೂದ್ ವಹಿಸಿದ್ದಾನೆ. ಈ ಸಂಘಟನೆ ದೇಶದ ಬುಡಕಟ್ಟು ಪ್ರದೇಶಗಳು ಮತ್ತು ನಗರ ಸುರಕ್ಷಿತ ಸ್ಥಳಗಳಲ್ಲಿ ಅಡಗುತಾಣಗಳನ್ನು ಹೊಂದಿದೆ. AQIS ಉಗ್ರಗಾಮಿ ಸಂಘಟನೆಗಳು ಪಾಕ್‌ನ ಸೇನೆಯ ನೆರವು ಪಡೆದುಕೊಂಡು ತನ್ನ ಜಾಲವನ್ನು ವಿಸ್ತರಿಸಲು ಮುಂದಾಗಿದೆ.
ಭಾರತದ ಈ ರಾಜ್ಯಗಳ ಮೇಲೆ ಉಗ್ರ ಜಾಲದ ಕಣ್ಣು?
ಕಾಶ್ಮೀರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಮತ್ತು ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ಸಣ್ಣ ಗುಂಪುಗಳನ್ನು ಹಾಗೂ ದಾಳಿಕೋರರನ್ನು ಸಕ್ರಿಯಗೊಳಿಸಲು ಉಗ್ರರು ಮುಂದಾಗಿದ್ದಾರೆ. ಮುಗ್ಧ ಬಡ ಮಕ್ಕಳನ್ನು ಆಮಿಷವೊಡ್ಡುವ ಮೂಲಕ ಮತ್ತು ಅವರನ್ನು ಭಯೋತ್ಪಾದಕರನ್ನಾಗಿ ಮಾಡುವ ಮೂಲಕ ಭಾರತದಲ್ಲಿ ಅಶಾಂತಿ ಹರಡುವುದು ಅವರ ಗುರಿಯಾಗಿದ್ದು, ಇಂತಹದ್ದನ್ನು ತಡೆಯಲು NIA ಹಾಗೂ ಭಾರತೀಯ ಸೇನೆ ನಿರಂತರವಾಗಿ ಕೆಲಸ ಮಾಡುತ್ತಿವೆ.
ಉಗ್ರರನ್ನು ನಾವು ಫೋಷಿಸಲ್ಲ ಎಂದ ಪಾಕ್!
ಪಾಕಿಸ್ತಾನವು ಅಂತಾರಾಷ್ಟ್ರೀಯ ಜಿಹಾದಿ ಸಂಘಟನೆಗಳನ್ನು ಬೆಂಬಲಿಸುವುದಿಲ್ಲ ಎಂದು ಪದೇ ಪದೇ ಹೇಳಿಕೊಳ್ಳುತ್ತಿದೆ. ಆದಾಗ್ಯೂ, AQIS, TTP ಮತ್ತು ISKP ನಂತಹ ಭಯೋತ್ಪಾದಕ ಸಂಘಟನೆಗಳ ಕಚೇರಿಗಳು ಪಾಕ್‌ನಲ್ಲಿಯೇ ಇವೆ. ಇನ್ನೂ ಅಪರೇಷನ್ ಸಿಂಧೂರದಲ್ಲಿ ಹತ್ಯೆಯಾದ ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕ್ ಅಧಿಕಾರಿಗಳು ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ IMFನಿಂದ ಸಾಲ ಪಡೆದು ಉಗ್ರರ ಕುಟುಂಬಕ್ಕೆ ಪಾಕ್ ಸರ್ಕಾರ ಪರಿಹಾರ ನೀಡಿದೆ ಎಂಬುದು ಬಹಿರಂಗವಾಗಿದೆ.
ಆಪರೇಷನ್ ಸಿಂಧೂರ
ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿ, 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿತ್ತು. ಈ ಕಾರ್ಯಾಚರಣೆಗೆ ʻಆಪರೇಷನ್ ಸಿಂಧೂರʼ ಎಂದು ಹೆಸರಿಡಲಾಗಿತ್ತು.