ವಿರೋಧ ನಡುವೆಯೇ ಹೊಸ ಕೈಗಾ ಅಣುಸ್ಥಾವರ ನಿರ್ಮಾಣಕ್ಕೆ ಚಾಲನೆ!

Public TV
2 Min Read
kwr kaiga 1

– ಕೈಗಾ 5, 6ನೇ ಘಟಕಕ್ಕೆ ಪರಿಸರ ಇಲಾಖೆ ಅಸ್ತು

ಕಾರವಾರ: ಹಲವು ವಿರೋಧದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿ 5, 6ನೇ ಘಟಕ ನಿರ್ಮಾಣಕ್ಕೆ ಪರಿಸರ ಮಂತ್ರಾಲಯ ಅನುಮಾತಿ ನೀಡಿದೆ. ಕೆಲವು ತಿಂಗಳ ಹಿಂದೆ ಪರಿಸರವಾದಿಗಳು ಹೊಸ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿರೋಧದ ನಡುವೆಯೂ ಪರಿಸರ ಮಂತ್ರಾಲಯದಿಂದ ಪರವಾನಿಗೆ ದೊರೆತಿರುವುದರಿಂದ 5, 6ನೇ ಘಟಕ ನಿರ್ಮಾಣಕ್ಕೆ ಇದ್ದ ದೊಡ್ಡ ಅಡೆ ತಡೆ ನಿವಾರಣೆಯಾಗಿದೆ.

ಹೇಗಿರಲಿದೆ ಹೊಸ ಘಟಕ!
ಕೈಗಾ 5 ಮತ್ತು 6ನೇ ಘಟಕವನ್ನು 21 ಸಾವಿರ ಕೋಟಿಯಲ್ಲಿ ನಿರ್ಮಾಣ ಮಾಡಲು ಈಗಾಗಲೇ ವಿದ್ಯುತ್ ನಿಗಮ ತೀರ್ಮಾನಿಸಿದೆ. 2ನೇ ರಿಯಾಕ್ಟರ್ ಮೂಲಕ 700ಮೆ. ವ್ಯಾಟ್ ವಿದ್ಯುತ್ ಉತ್ಪಾದನೆಯ ಉದ್ದೇಶವನ್ನು ಹೊಂದಿದ್ದು, 2026 ರ ವೇಳೆಗೆ ಉದ್ದೇಶಿತ ಯೋಜನೆ ಮುಕ್ತಾಯವಾಗಲಿದೆ.

KWR KAIGA

ಹೆಚ್ಚುವರಿ ಘಟಕ ನಿರ್ಮಾಣ ಮಾಡುವ ಕಾರಣ 789 ಖಾಯಂ ನೌಕರ ಅಗತ್ಯವಿದ್ದು, ಘಟಕ ನಿರ್ಮಾಣ ಮಾಡಲು 54.09 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಇರುವ 8,700 ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ 732 ಹೆಕ್ಟೇರ್ ಪರ್ಯಾಯ ಅರಣ್ಯ ಬೆಳಸಲು ಸೂಚನೆ ನೀಡಲಾಗಿದೆ.

ಲಾಭವೇನು?
ಪರಿಸರ ಹಾನಿ ಇಲ್ಲದೇ ವಿದ್ಯುತ್ ಉತ್ಪಾದನೆ ಮಾಡುವ ಭರವಸೆಯನ್ನು ನೀಡಿರುವ ಆಡಳಿತ ಮಂಡಳಿ ಸ್ಥಳೀಯರಿಗೆ ಉದ್ಯೋಗ, ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹೊಸ ನಿಯಮದಂತೆ 700ಮೆ.ವ್ಯಾ. ಕರ್ನಾಟಕಕ್ಕೆ ನೀಡುವ ಭರವಸೆ ನೀಡಿದೆ. ಉದ್ದೇಶಿತ 5, 6ನೇ ಘಟಕದಲ್ಲಿ 789 ಜನರಿಗೆ ಖಾಯಂ ಉದ್ಯೋಗ ಹಾಗೂ 4 ಸಾವಿರ ಜನರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಲಭಿಸಲಿದ್ದು, ಪರೋಕ್ಷವಾಗಿ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

ಪ್ರಸ್ತಾವನೆಯಲ್ಲಿ ಏನಿತ್ತು?
ಕಳೆದ 24 ರಂದು ದೆಹಲಿಯಲ್ಲಿ ಪರಿಸರ ಪರಿಣಾಮಗಳ ಅಧ್ಯಾಯನ ಸಮಿತಿ ಸಭೆಯಲ್ಲಿ ಘಟಕ ನಿರ್ಮಾಣಗಳ ಪ್ರಸ್ತಾಪನೆಯನ್ನು ಪರಿಶೀಲಿಸಿ ಚರ್ಚೆ ನಡೆಸಲಾಗಿತ್ತು. 2018ರ ಸೆ.9 ರಂದು ವನ್ಯಜೀವಿ ವನ್ಯಜೀವಿ ವಿಭಾಗದಿಂದ ಅನುಮತಿ ದೊರೆತಿದೆ. ಸ್ಥಾವರದ ಎರಡರಿಂದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನ ವಸತಿ ಇದ್ದರೂ ಇಲ್ಲಿ ವಿಕೀರ್ಣದ ಮಟ್ಟ ಉಳಿದೆಡೆಗಿಂತ ಕಡಿಮೆ ಮಟ್ಟ ಹಾಗೂ ಉಳಿದೆಡೆ ನೈಸರ್ಗಿಕ ವಿಕೀರ್ಣಕ್ಕಿಂತ ಕಡಿಮೆ ಮಟ್ಟದಲ್ಲಿದೆ ಎಂದು ಯೋಜನಾ ವರದಿಯಲ್ಲಿ ಸಲ್ಲಿಸಲಾಗಿತ್ತು.

kaiga

ಘಟಕ ನಿರ್ಮಾಣಕ್ಕೆ ಅಗತ್ಯವಾದ 54.09 ಹೆಕ್ಟೇರ್ ಭೂಮಿ ಈಗಾಗಲೇ ನಿಗಮದ ಸ್ವಾದೀನದಲ್ಲಿದೆ. ಹೆಚ್ಚುವರಿ ಭೂಮಿ ಸ್ವಾದೀನ ಪಡಿಸಿಕೊಳ್ಳುವ ಅಗತ್ಯವಿಲ್ಲ. ಈ ಘಟಕದ ಉದ್ಯೋಗಿಗಳಿಗಾಗಿ ಮಲ್ಲಾಪುರ, ಮಿರ್ಜೆಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದೆ. ನಿಗಮದ ಬಳಿ 95.09 ಹೆಕ್ಟೇರ್ ಭೂಮಿ ನಿಗಮದ ಬಳಿ ಇದೆ. 51.38 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ ನಾಲ್ಕು ಘಟಕಕ್ಕೆ ಬಳಕೆಯಾಗಿದೆ, ಉಳಿದ 44.53 ಹೆಕ್ಟೇರ್ ಭೂಮಿಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುವುದಾಗಿ ನಿಗಮ ಹೇಳಿದೆ.

ಶಾಸಕರ ಬೆಂಬಲ!: ಕೈಗಾ ಅಣು ಸ್ಥಾವರದ ಪರದಿಯು ಕಾರವಾರ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಹೀಗಾಗಿ ಇಲ್ಲಿನ ಶಾಸಕರ ಅಭಿಪ್ರಾಯ ಕೂಡ ಮುಖ್ಯವಾಗಿದ್ದು, ಯಲ್ಲಾಪುರ ಶಾಸಕರಾದ ಶಿವರಾಮ್ ಹೆಬ್ಬಾರ್, ಕಾರವಾರದ ಶಾಸಕರಾದ ರೂಪಾಲಿನಾಯ್ಕ ಅವರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ಪ್ರಸ್ತಾಪವನ್ನು ನಿಗಮದ ಮುಂದಿಟ್ಟಿದ್ದಾರೆ.

ಸ್ಥಳೀಯರ ವಿರೋಧ!: ಕೈಗಾದ 5, 6ನೇ ಘಟಕದ ಪ್ರಸ್ತಾಪ ಆಗುತ್ತಿದ್ದಂತೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಸ್ಥಳೀಯರು ಹಾಗೂ ಪರಿಸರವಾದಿಗಳು ಅಹವಾಲು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ವಿಕೀರ್ಣದಿಂದ ಜನರಿಗೆ ಕ್ಯಾನ್ಸರ್ ಹೆಚ್ಚಾಗುವ ಕುರಿತು ವರದಿಯ ಪ್ರಸ್ತಾಪ ಸಹ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *