ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ವಾಕ್ ಸಮಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಮ್ಮ ವಿರುದ್ಧ ಟೀಕೆ ಮಾಡಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ನಟ ಯಶ್ ಸಿನಿಮಾ ಶೈಲಿಯಲ್ಲೇ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಟ ಯಶ್, ರಾಜ್ಯದಲ್ಲಿ ಆಡಳಿತ ನಡೆಸಿದ ಕೆಲವರು ಮಾಡದ ಕೆಲಸಗಳಿಂದ ಉತ್ತರ ಕರ್ನಾಟಕದಲ್ಲಿ ಜನರಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅವರಿಗೆ ನೀರು ಕೊಡುವ ಕಾರ್ಯದಿಂದ ಮನೆ ಬಾಡಿಗೆ ಕಟ್ಟಲು ಆಗಲಿಲ್ಲ. ಬಾಡಿಗೆ ಕಟ್ಟಬೇಕಾ? ನೀರು ಕೊಡಬೇಕಾ? ಎಂಬ ಪ್ರಶ್ನೆ ಬಂದಾಗ ನಾನು ಅದನ್ನು ಜನರಿಗೆ ಉಪಯೋಗಿಸಿದೆ. ಆದ್ದರಿಂದ ನನ್ನ ಮೇಲೆ ಅದೊಂದು ಮಾತು ಇದೆ. ಆದರೆ ಕೆಲವರು ಹುಟ್ಟುತ್ತಲೇ ಎಲ್ಲವನ್ನು ಕೇಳಿಕೊಂಡು ಬಂದಿರುತ್ತಾರೆ. ಎಲ್ಲದಕ್ಕೂ ಜನ ಉತ್ತರ ನೀಡುತ್ತಾರೆ. ಜನರಿಗೆ ಮಾಡಬೇಕು ಎಂದರೆ ದೇವರು ಕೊಡುತ್ತಾರೆ. ಆದರೆ ಬಾಡಿಗೆ ಕಟ್ಟಲು ಕೊಡಲ್ಲ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬರುವುದು ಬೇಡ ಎಂದು ಪ್ರಾರ್ಥನೆ, ನೀವು ನನ್ನ ಪರ ಪ್ರಾರ್ಥನೆ ಮಾಡಿ ಎಂದರು.
ಸಿನಿಮಾದಲ್ಲಿ ಬಂಡವಾಳ ಹಾಕಿ ಕಷ್ಟ ಪಡುತ್ತೇವೆ. ಅದರಿಂದ ಹಣ ಬರುತ್ತದೆ ಅಷ್ಟೇ. ಆದರೆ ನಾವು ಅಭಿವೃದ್ಧಿ ಮಾಡಿಲ್ಲ ಎನ್ನುತ್ತಾರೆ. ಅವರಿಗೆ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ನಾವು ಎಂದು ಸುಳ್ಳು ಭರವಸೆಗಳನ್ನು ನೀಡಿಲ್ಲ. ಈಗ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ ಅದನ್ನು ಮುಂದೇ ಮಾಡುತ್ತೇವೆ. ನಾವು ಯಾರನ್ನು ಟೀಕೆ ಮಾಡಿಲ್ಲ. ನಿಮ್ಮ ಸಾಮಥ್ರ್ಯ ಏನಿದೆ ಅದನ್ನು ಮಾಡಿ. ಮಂಡ್ಯ ಜನರಿಗೆ ಹೇಳುವುದಿಷ್ಟೇ ಒಳ್ಳೆಯ ಅಭ್ಯರ್ಥಿ ಸಿಕ್ಕಿದ್ದಾರೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ರು.
ಸಂಜೆ ಮಳವಳ್ಳಿ ಸರ್ಕಲ್ ಬಳಿ ಮಾತನಾಡಿದ ಯಶ್, ಇಲ್ಲಿ ಯಾರು ಕೂಡ ದುಡ್ಡಿನ ಆಸೆಗೆ ಬಂದಿಲ್ಲ. ಕಳೆದ ಒಂದು ವಾರದಿಂದ ಮಂಡ್ಯದಲ್ಲಿ ಓಡಾಡುತ್ತಿದ್ದು, ಕ್ಷೇತ್ರದ ಎಲ್ಲ ಊರಿನಲ್ಲೂ ಅಂಬರೀಶ್ ಅಣ್ಣನ ಕೊಡುಗೆ ಕಾಣುತ್ತಿದೆ. ನಾವು ಕಳ್ಳೆತ್ತುಗಳಂತೆ ಎಂದು ಹೇಳಿಕೆ ನೀಡಿದ್ದು, ಏನು ಕದಿದ್ದೀವಿ ಹೇಳಿ ಸ್ವಾಮಿ? ನಾವೂ ಮಾತನಾಡಿದರೆ ಸಿನಿಮಾದವರಂತೆ, ಅವರು ಸತ್ಯಹರಿಶ್ಚಂದ್ರನ ತುಂಡುಗಳ ಎಂದು ಯಶ್ ಪ್ರಶ್ನೆ ಮಾಡಿದರು.
ಅಂಬರೀಶ್ ಅಣ್ಣನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ನಿಮಗೆ ಕೆಲಸ ಮಾಡಿದ್ದೇವೆ ಎಂದು ಸಾಕ್ಷಿ ಕೊಡಕ್ಕೆ ಆಗಲ್ಲ. ಆ ಸಾಕ್ಷಿ ಜನ ಕೊಡುತ್ತಾರೆ. ನಾವು ಮನಸಾಕ್ಷಿ ಇಟ್ಟುಕೊಂಡು ಬದುಕುತ್ತಿದ್ದೇವೆ. ಇವತ್ತು ದುಶ್ಮನಿ ಮಾಡಿದರೆ ನಾಳೆ ಸ್ನೇಹ ಮಾಡಲ್ಲ. ಒಂದು ಸಾರಿ ದುಶ್ಮನಿ ಅಂದರೆ ಅಷ್ಟೇ ಜೀವನಪೂರ್ತಿ ದುಶ್ಮನಿ ಮಾಡುತ್ತೇವೆ ಎಂದರು.
ಅಂಬರೀಶಣ್ಣನ ಮೇಲಿನ ಅಭಿಮಾನದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಯಾರ ಜೊತೆ ದುಶ್ಮನಿ ಮಾಡುವ ಉದ್ದೇಶ ಇಲ್ಲ. ಆದರೆ ಅಂಬರೀಶಣ್ಣನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಮಾತ್ರ ಸಹಿಸಲ್ಲ. ಈ ಸಲ ನೀವು ಸುಮಕ್ಕನನ್ನ ಗೆಲ್ಲಿಸಲಿಲ್ಲ ಎಂದರೆ ಮತ್ತೆ ನಾನು ನಿಮ್ಮ ಮುಂದೆ ಬರಲು ಮುಖ ಇರಲ್ಲ, ಬರೋದು ಇಲ್ಲ. ದಯವಿಟ್ಟು ಅಕ್ಕನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.