– ದೇಶದಲ್ಲಿ ಇಳಿಕೆಯಾಗುತ್ತಾ ಪೆಟ್ರೋಲ್, ಡೀಸೆಲ್ ದರ?
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ದೇಶದ ಜನರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ (Excise Duty) ಕಡಿತಗೊಳಿಸಿದೆ. ಪೆಟ್ರೋಲ್ (Petrol) ಮೇಲಿನ ಸುಂಕ 13 ರೂ. ನಿಂದ 3 ರೂಪಾಯಿಗೆ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನ 10 ರೂ. ನಿಂದ ಶೂನ್ಯಕ್ಕೆ ಇಳಿಕೆ ಮಾಡಿದೆ.
ಅಮೆರಿಕ ಮತ್ತು ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನಿಂದ ಭಾರತೀಯ ತೈಲ ಕಂಪನಿಗಳು ಎದುರಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ (Central Government) ಈ ನಿರ್ಧಾರ ಕೈಗೊಂಡಿದೆ. ಆದ್ರೆ ಇದರಿಂದ ಗ್ರಾಹಕರಿಗೆ ಯಾವುದೇ ಉಳಿತಾಯವಾಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಹಾರ್ಮುಜ್ ಜಲಸಂಧಿಯನ್ನು ಇರಾನ್ ಭಾರತಕ್ಕೆ ಮುಕ್ತಗೊಳಿಸಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಹಾರ್ಮುಜ್ ಬಿಕ್ಕಟ್ಟಿನಿಂದ ಪ್ರತಿ ಬ್ಯಾರಲ್ ಕಚ್ಚಾ ತೈಲ 100 ಡಾಲರ್‌ಗಳ ಗಡಿ ದಾಟಿದೆ. ಇದರಿಂದ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ 48.8 ರೂ. ನಷ್ಟ ಅನುಭವಿಸುತ್ತಿವೆ. ಕೇಂದ್ರ ಸರ್ಕಾರದ ಕ್ರಮವು ಕಂಪನಿಗಳಿಗೆ ನಷ್ಟ ಸರಿದೂಗಿಸಲು ನೆರವಾಗಲಿದೆ. ಇದನ್ನೂ ಓದಿ: ಶತ್ರುಗಳಿಗೆ ಹಾರ್ಮುಜ್ ಜಲಸಂಧಿ ನಿರ್ಬಂಧಿಸುವುದು ಇರಾನ್‌ನ ಕಾನೂನುಬದ್ಧ ಹಕ್ಕು: ವಿಶ್ವಸಂಸ್ಥೆಯಲ್ಲಿ ಅರಘ್ಚಿ ಮಾತು
ಕೇಂದ್ರ ಸರ್ಕಾರವು ಈ ಹಿಂದೆ ಮೇ 2022 ರಲ್ಲಿ ಅಬಕಾರಿ ಸುಂಕವನ್ನ ಕಡಿತಗೊಳಿಸಿತ್ತು. ಇದರ ನಂತರ, ಪೆಟ್ರೋಲ್ ಪ್ರತಿ ಲೀಟರ್‌ಗೆ 8 ರೂ. ಮತ್ತು ಡೀಸೆಲ್ (Diesel) ಪ್ರತಿ ಲೀಟರ್‌ಗೆ 6 ರೂ.ನಷ್ಟು ಅಗ್ಗವಾಗಿತ್ತು. ಆದ್ರೆ ಕೇಂದ್ರ ಸರ್ಕಾರದ ಇಂದಿನ ಕ್ರಮದಿಂದ ಗ್ರಾಹಕರಿಗೆ ಯಾವುದೇ ಲಾಭವಿಲ್ಲ ಎಂದು ಹೇಳಲಾಗ್ತಿದೆ.

ನಿನ್ನಯಷ್ಟೇ ಭಾರತದ ಬಳಿ ಪ್ರಸ್ತುತ 60 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನು ಮತ್ತು 30 ದಿನಗಳಿಗೆ ಆಗುವಷ್ಟು ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಇನ್ನು ನಯಾರ ಎನರ್ಜಿ ಖಾಸಗಿ ಸಂಸ್ಥೆಯು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5.3 ರೂ. ಮತ್ತು 3 ರೂ.ಗಳಷ್ಟು ಹೆಚ್ಚಿಸಿರುವುದು ಮಾರುಕಟ್ಟೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎನ್ನಲಾಗಿದೆ. ಇದನ್ನೂ ಓದಿ: ಮಾತುಕತೆ ಚೆನ್ನಾಗಿ ನಡೆಯುತ್ತಿದೆ – ಮತ್ತೆ 10 ದಿನ ಕದನ ವಿರಾಮ ಘೋಷಿಸಿದ ಟ್ರಂಪ್

