ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪತಿ ಇಮ್ರಾನ್‌ ಖಾನ್‌

Public TV
2 Min Read
imran khan bushra bibi

ಇಸ್ಲಾಮಾಬಾದ್: ತನ್ನ ಪತ್ನಿ ಬುಶ್ರಾ ಬೀಬಿಗೆ  (Bushra Bibi) ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಜೈಲಿನಲ್ಲಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಪ್ರಥಮ ಮಹಿಳೆಯೂ ಆಗಿರುವ ಬುಶ್ರಾ ಬೀಬಿ ಅವರನ್ನು ಜೈಲಾಗಿ ಮಾರ್ಪಡಿಸಲಾದ ಖಾಸಗಿ ನಿವಾಸದಲ್ಲಿ ಬಂಧಿಸಿಡಲಾಗಿದ್ದು, ಅಲ್ಲಿಯೇ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಯಾವುದೇ ಹಾನಿಯಾದರೂ ಸೇನಾ ಮುಖ್ಯಸ್ಥರೇ ಹೊಣೆಯಾಗಬೇಕು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು

ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಅವರು, ಬುಶ್ರಾ ಬೀಬಿಯವರಿಗೆ ವಿಷ ಹಾಕುವ ಪ್ರಯತ್ನ ನಡೆದಿದೆ. ಆಕೆಯ ಚರ್ಮ ಮತ್ತು ನಾಲಿಗೆಯ ಮೇಲೆ ಗುರುತುಗಳಿವೆ. ಇದು ವಿಷದ ಅಡ್ಡ ಪರಿಣಾಮವಾಗಿದೆ. ಇದರ ಹಿಂದೆ ಯಾರಿದ್ದಾರೆಂದು ನನಗೆ ತಿಳಿದಿದೆ ಎಂದಿದ್ದಾರೆ.

ಬುಶ್ರಾ ಬೀಬಿಗೆ ಏನಾದರೂ ತೊಂದರೆಯಾದರೆ, ಇಸ್ಲಾಮಾಬಾದ್‍ನ ಬನಿ ಗಾಲಾ ನಿವಾಸ ಮತ್ತು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಗುಪ್ತಚರ ಸಂಸ್ಥೆಯ ಸದಸ್ಯರು ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

IMRAN KHAN

49 ವರ್ಷದ ಬುಶ್ರಾ ಬೀಬಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಹೊಣೆಯನ್ನು ಶೌಕತ್ ಖಾನಮ್ ಆಸ್ಪತ್ರೆಯ ಡಾ. ಆಸಿಮ್‍ಗೆ ವಹಿಸಲು ಆದೇಶಿಸುವಂತೆ ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಒತ್ತಾಯಿಸಿದ್ದಾರೆ. ಮೊದಲು ಬೀಬಿ ಪರೀಕ್ಷಿಸಿರುವ ವೈದ್ಯರನ್ನು ನಾವು ನಂಬೋದಿಲ್ಲ. ವಿಷಪ್ರಾಶನ ಮಾಡಿಸಿದ ಬಗ್ಗೆ ಸಂರ್ಪೂಣವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇಮ್ರಾನ್ ಖಾನ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೋರ್ಟ್, ಬುಶ್ರಾ ಬೀಬಿ ವೈದ್ಯಕೀಯ ಪರೀಕ್ಷೆಯ ಕುರಿತು ವಿವರವಾಗಿ ಅರ್ಜಿಯಲ್ಲಿ ತಿಳಿಸುವಂತೆ ಇಮ್ರಾನ್ ಖಾನ್ ಪರ ವಕೀಲರಿಗೆ ನಿರ್ದೇಶನ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬುಶ್ರಾ ಬೀಬಿ, ನನ್ನ ಕಣ್ಣುಗಳು ಊದಿಕೊಳ್ಳುತ್ತಿವೆ, ನನ್ನ ಎದೆ ಭಾಗ ಮತ್ತು ಹೊಟ್ಟೆ ಭಾಗದಲ್ಲಿ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದೇನೆ. ಸೇವಿಸುವ ಆಹಾರ ಮತ್ತು ಕುಡಿಯುವ ನೀರು ಕಹಿ ಅನುಭವ ನೀಡುತ್ತಿವೆ. ಕೆಲವು ಅನುಮಾನಾಸ್ಪದ ವಸ್ತುವನ್ನು ಜೇನುತುಪ್ಪದಲ್ಲಿ ಮೊದಲು ಬೆರೆಸಲಾಗಿದೆ. ನಾನು ತಿನ್ನುವ ಆಹಾರದಲ್ಲಿ ಟಾಯ್ಲೆಟ್ ಕ್ಲೀನರ್ ಬೆರಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಾನು ಈ ವಿಷಯದ ಬಗ್ಗೆ ಕೇಳಿದಾಗ ಜೈಲಿನಲ್ಲಿರುವ ಒಬ್ಬ ಸಿಬ್ಬಂದಿ ನನಗೆ ಆಹಾರದಲ್ಲಿ ವಿಷಪೂರಿತ ವಸ್ತುಗಳನ್ನು ಬೆರೆಸಿರುವ ಬಗ್ಗೆ ಹೇಳಿದರು. ಆದ್ರೆ ನಾನು ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹುವಾ ಮೊಯಿತ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

Share This Article