ಮೆಕ್ಸಿಕೋ: ಉರುಗ್ವೆಯ ಮಾಜಿ ವಿಶ್ವ ಸುಂದರಿ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಗುರುವಾರ ಬೆಳಗ್ಗೆ ಮೆಕ್ಸಿಕೋದಲ್ಲಿ ನಡೆದಿದೆ.
ಫ್ಯಾಟಿಮಿಹ್ ಡವಿಲ್ಲಾ ಸೋಸಾ(31) ಅನುಮಾಸ್ಪದವಾಗಿ ಮೃತಪಟ್ಟ ಮಾಜಿ ಸುಂದರಿ. ಗುರುವಾರ ಬೆಳಗಿನ ಜಾವ ಹೋಟೆಲ್‍ನ ಬಾತ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಫ್ಯಾಟಮಿಹ್ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.
ಫ್ಯಾಟಿಮಿಹ್ ರೂಪದರ್ಶಕಿ ಆಗಿದ್ದು, ಕೆಲಸದ ಸಂದರ್ಶನಕ್ಕಾಗಿ ಏಪ್ರಿಲ್ 23ರಂದು ಮೆಕ್ಸಿಕೋಗೆ ಆಗಮಿಸಿದ್ದರು. ಮೆಕ್ಸಿಕೋಗೆ ಆಗಮಿಸಿದ ಬಳಿಕ ಫ್ಯಾಟಿಮಿಹ್ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದಳು. ಆದರೆ ಗುರುವಾರ ಬೆಳಗ್ಗೆ ರೂಪದರ್ಶಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಫ್ಯಾಟಿಮಿಹ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಲ್ಲದೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫ್ಯಾಟಿಮಿಹ್ 2006ರಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿ ಭುವನ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡಿದ್ದರು. ಬಳಿಕ 2008ರಲ್ಲಿ ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.