ಕೊಪ್ಪಳ: ಭಾರತೀಯ ಜನತಾ ಪಕ್ಷದ ನಾಯಕರ ಮಾತು ಕೇಳದ ದೊಡ್ಡ ದೊಡ್ಡ ಉದ್ಯಮಿಗಳು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ನಾಯಕರು, ಉದ್ಯಮಿಗಳು ಸೂಸೈಡ್ ಮಾಡಿಕೊಂಡು ಸಾಯುತ್ತಿದ್ದಾರೆ. ಇಡಿ ಹಾಗೂ ಸಿಬಿಐ ಕಿರಿಕಿರಿಯಿಂದ ಸಾಯುತ್ತಿದ್ದಾರೆ. ಸಂಸ್ಥೆಗಳನ್ನ ಛೂ ಬಿಟ್ಟು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ದೊಡ್ಡ ದೊಡ್ಡ ಉದ್ಯಮಿಗಳು ಸಾಯುತ್ತಿದ್ದಾರೆ. ಸಿದ್ದಾರ್ಥ ಇದಕ್ಕೆ ಉದಾಹರಣೆ ಎಂದು ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.
ದೇಶದಲ್ಲಿ ಆರ್ಥಿಕ ಪರಸ್ಥಿತಿ ಅಧೋಗತಿಗೆ ಹೋಗಿದೆ. ಆದರೆ ಮೋದಿ ಭಕ್ತರೆಲ್ಲ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಶ್ರೀಮಂತ ಪಾಟೀಲ್ ಅವರನ್ನ ರಾತ್ರೋ ರಾತ್ರಿ ಕರೆದುಕೊಂಡು ಹೋಗಿದ್ದಕ್ಕೆ, ಅಲ್ಲದೆ ಮುಂಬೈ ಹೊಟೇಲಿನಲ್ಲಿ ಶಾಸಕರನ್ನ ಬ್ಯಾಲೆನ್ಸ್ ಮಾಡಿದ್ದಕ್ಕೆ ಲಕ್ಷ್ಮಣ ಸವದಿಗೆ ಸಚಿವ ಸ್ಥಾನದ ಗಿಫ್ಟ್ ಕೊಟ್ಟಿದ್ದಾರೆ ಎಂದರು.
ಕೊನೆಗೂ ಯಡಿಯೂರಪ್ಪ ಇಂದು ಸಚಿವ ಸಂಪುಟ ರಚನೆ ಮಾಡಿದ್ದಾರೆ. ಆದರೆ ಹೈದರಾಬಾದ್ ಕರ್ನಾಟಕ ಮರೆತಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಶೂನ್ಯವಾಗಿದೆ. ಚುನಾವಣೆ ಮುನ್ನ ಶ್ರೀರಾಮಲುರನ್ನ ಉಪ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಇದೀಗ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ತಂಗಡಗಿ ಹೇಳಿದ್ದಾರೆ.
ಮೋದಿ ಮೋದಿ ಅನ್ನೋ ಭಕ್ತರಿಗೆ ಹೈಕ ಭಾಗಕ್ಕೆ ಏನು ಕೊಟ್ಟರು ಎಂದು ಪ್ರಶ್ನಿಸಿದ ತಂಗಡಗಿ, ರಾಮಲು ಉಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಆಸೆ ಇಟ್ಟುಕೊಂಡಿದ್ದೆ. ಬೋವಿ ಸಮುದಾಯಕ್ಕೂ ಯಡಿಯೂರಪ್ಪ ಸಚಿವ ಸ್ಥಾನ ಕೊಟ್ಟಿಲ್ಲ. ಮುಂದಿನ ದಿನದಲ್ಲಿ ಹೈಕ ಭಾಗದ ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ. ಸಮಪಾಲು ಸಮಬಾಳು ಎಲ್ಲಿದೆ. ಸರ್ಕಾರ ಆಗಲು ಬಾಲಚಂದ್ರ ಜಾರಕಿಹೊಳಿ ಕಾರಣವಾಗಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ತಿಳಿಸಿದರು.
ಸರ್ಕಾರದ ಆಯುಷ್ಯ ಕಮ್ಮಿಯಾಗಿದ್ದು, ಸರ್ಕಾರದ ಅವಧಿ ಆರು ತಿಂಗಳು ಅಥವಾ ಎಂಟು ತಿಂಗಳು ಮಾತ್ರ. ಯಾಕಂದರೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಬೀದಿಗೆ ನಿಲ್ಲಿಸಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.