ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪ್ರಿಯತೆ ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಕಿಡಿಕಾರಿದರು.
2017 ದಸರಾ ಜಂಬೂ ಸವಾರಿ ದಿನ ಅಂದಿನ ಸಿಎಂ ಸಿದ್ದರಾಮಯ್ಯ ಅವರು ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪೂಜೆ ಸಲ್ಲಿಸಿದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, 2017 ದಸರಾ ಜಂಬೂ ಸವಾರಿ ದಿನ ಸಿದ್ದರಾಮಯ್ಯ ಏನು ಊಟ ಮಾಡಿದರು ಎಂಬುದು ನನಗೆ ಜ್ಞಾಪಕ ಇಲ್ಲ. ಅದು ಜ್ಞಾಪಕ ಇಟ್ಟು ಕೊಳ್ಳುವ ವಿಚಾರವೂ ಅಲ್ಲ. ಸಾತ್ವಿಕ ಆಹಾರ ತಿನ್ನುವವರು ಈ ಸಮಾಜದಲ್ಲಿ ಮಾಡುತ್ತಿರುವ ದೌರ್ಜನ್ಯ ಎಷ್ಟು ಎಂಬುದು ನೋಡಿದ್ದೇವೆ ಎಂದರು.
ಸಾತ್ವಿಕ ಆಹಾರ ಮಾಡುತ್ತೇವೆ ಅಂತಾ ಹೇಳಿ ಅಮಾನವೀಯ ನಡವಳಿಕೆ ಪ್ರದರ್ಶನ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಊಟ ಎಂಬುದು ಚರ್ಚೆ ವಿಚಾರವೇ ಅಲ್ಲ. ಕೆಲಸಕ್ಕೆ ಬಾರದ ವಿಚಾರ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರ ಜನಪ್ರಿಯತೆ ನೋಡಿ ಉರಿ ಶುರುವಾಗಿದೆ. ಧರ್ಮ, ದೇವರ ಹೆಸರಿನಲ್ಲಿ ರಾಜಕೀಯ ಬೆಳೆ ಕಾಳು ಬೇಯಿಸಿ ಕೊಳ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮಾಂಸದೂಟ ಮಾಡಿಯೇ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದು: ಮಾಜಿ ಮೇಯರ್ ರವಿಕುಮಾರ್
ಕಣ್ಣಾರೆ ನಾನೇ ಸಾಕ್ಷಿ ಎಂದವರು ಅವತ್ತೇ ಯಾಕೆ ಅದನ್ನು ಪ್ರಶ್ನಿಸಿರಲಿಲ್ಲ?. ಏನು ಊಟ ಮಾಡ್ದೆ, ಏನು ಬಟ್ಟೆ ಹಾಕಿದೆ ಎಂಬುದು ನಮಗೆ ಮುಖ್ಯವಲ್ಲ. ನಂಬಿಕೆಯೇ ಬೇರೆ, ಆಹಾರ ಪದ್ಧತಿಯ ಹಕ್ಕೇ ಬೇರೆ. ಕೈಲಾಗದರು ಮೈ ಪರಚಿಕೊಳ್ಳುತ್ತಿದ್ದಾರೆ. ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಎಂದು ವಾಗ್ದಾಳಿ ನಡೆಸಿದರು.