ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸುತ್ತಿದ್ದ ಮಾಜಿ ಸಚಿವ ಡಿ. ಮಂಜುನಾಥ್(92) ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1983 ರಲ್ಲಿ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಎಂಎಲ್ಸಿ ಆಗಿದ್ದ ಅವರು 2004ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಸಚಿವರಾಗಿದ್ದರು. ಕಾಂಗ್ರೆಸ್ಸಿನ ಹಿರಿಯ ಧುರೀಣ ಕೆ.ಹಚ್ ರಂಗನಾಥ್ ಅವರನ್ನು ಸೋಲಿಸಿ ಧರಂಸಿಂಗ್ ಸಂಪುಟದಲ್ಲೂ ಉನ್ನತ ಶಿಕ್ಷಣ ಖಾತೆ ಹಾಗೂ ಅರಣ್ಯ ಖಾತೆ ಸಚಿವರಾಗಿದ್ದರು. ಅಲ್ಲದೆ ಒಂದು ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಡಿ.ಮಂಜುನಾಥ್ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
Advertisement
Advertisement
ಹಿರಿಯೂರಿನ ಜೆಡಿಎಸ್ ಮುಖಂಡ ರತ್ನಾಕರ್ ಅವರ ಪುತ್ರರಾಗಿರುವ ಡಿ.ಮಂಜುನಾಥ್ ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹಿರಿಯೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯ ಜೀವನದಿಂದ ತಟಸ್ಥರಾಗಿದ್ದು, ಕಳೆದ ಒಂದು ವಾರದ ಹಿಂದೆ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
Advertisement
ಬಿಎಸ್ಸಿ, ಬಿಎಲ್ಎಲ್ಬಿ ಪದವೀಧರರಾಗಿರುವ ಇವರು 1959ರಲ್ಲಿ ತಾಲೂಕು ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೈಸೂರು ರಾಜ್ಯದ ಯುವ ರೈತರ ಸಂಘದ ಸದಸ್ಯರಾಗಿದ್ದರು. ಮತ್ತು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಚಿತ್ರದುರ್ಗದಲ್ಲಿ ಹಲವಾರು ಹಾಸ್ಟೆಲ್ ಸಮಿತಿಯ ಸದಸ್ಯರು ಕೂಡ ಆಗಿದ್ದರು. ಚಳ್ಳಕೆರೆ ತಾಲೂಕಿನ ಶ್ರೀ ಬಸವೇಶ್ವರ ಸಹಕಾರ ಕೃಷಿ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ನಾಲ್ಕನೇ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ (1967) ಹಿರಿಯೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
Advertisement
ವಿಧಾನಸಭೆಯ ಉಪಸ್ಪೀಕರ್ ಆಗಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು. 1977 ರಲ್ಲಿ ಜನತಾ ಪಕ್ಷಕ್ಕೆ ಸೇರಿದ್ದರು. ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಜನತಾ ಪಕ್ಷದ ಅಧ್ಯಕ್ಷರಾಗಿ 3 ವರ್ಷ ಕೆಲಸ ಮಾಡಿದ್ದರು. 1983 ರ ಮಾರ್ಚ್ ನಲ್ಲಿ ಶಾಸಕಾಂಗ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು. 1984 ರ ಆಗಸ್ಟ್ 18 ರಿಂದ ಯೋಜನಾ, ಸಂಸ್ಥೆಗಳ ಸಚಿವರಾಗಿ ನೇಮಕಗೊಂಡರು. 1985 ರ ಮಾರ್ಚ್ನಲ್ಲಿ ಮತ್ತೆ ಕಾರ್ಮಿಕ ಸಚಿವರಾಗಿ ನೇಮಕಗೊಂಡರು. 1986ರ ಜುಲೈ 18 ರಿಂದ 1987 ರ ಆಗಸ್ಟ್ 26 ರವರೆಗೆ ಶಿಕ್ಷಣ ಸಚಿವರಾಗಿ ನೇಮಕಗೊಂಡರು. ಕರ್ನಾಟಕ ಪ್ರದೇಶ ಜನತಾ ಪಕ್ಷದ ಅಧ್ಯಕ್ಷರಾದ ಮೊದಲ ಪರಿಶಿಷ್ಠ ಜಾತಿ ವ್ಯಕ್ತಿ ಮತ್ತು ಅಧ್ಯಕ್ಷರು ಇವರಾಗಿದ್ದರು. 1987ರ ಸೆಪ್ಟೆಂಬರ್ 2 ರಂದು ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.