ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಜೆಡಿಎಸ್ ಕೇಳಿದರೆ, ಮಂಡ್ಯ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆ ಇದೆ ಎಂದು ಮಾಜಿ ಸಚಿವ, ಕೈ ನಾಯಕ ಎ. ಮಂಜು ಹೇಳಿದ್ದಾರೆ.
ಕೆಲ ಆಯ್ದು ಮಾಜಿ ಶಾಸಕರು ಹಾಗೂ ಸಚಿವರ ಜೊತೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನದಲ್ಲಿ ಸದ್ಯ ಜೆಡಿಎಸ್ ಸಂಸದರಿದ್ದರೆ, ಮಂಡ್ಯದಲ್ಲಿ ನಮ್ಮ ಸಂಸದರಿದ್ದಾರೆ. ಹಾಸನ ಕ್ಷೇತ್ರವನ್ನು ಅವರು ಕೇಳಿದರೆ ನಮಗೆ ಮಂಡ್ಯ ಬಿಟ್ಟು ಕೊಡಬೇಕೆಂಬ ಬೇಡಿಕೆ ನಮ್ಮಲಿದೆ. ನಮ್ಮ ಪಕ್ಷದ ನಾಯಕರಾದ ಅಂಬರೀಶ್ ಅವರು ಈಗ ಇಲ್ಲ, ಆದ್ದರಿಂದ ಅವರ ಮಗನಿಗೆ ಟಿಕೆಟ್ ನೀಡಲು ಕೇಳುತ್ತೇವೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.
ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗನ್ನು ಕೇಳಿರುವ ವಿಚಾರ ಅವರ ಬೇಡಿಕೆಗೆ ಸಂಬಂಧಿಸಿದೆ. ಅವರು 15 ಸ್ಥಾನಗಳನ್ನು ಕೇಳಿದರೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್ ಮಾತ್ರ. ಆದ್ದರಿಂದ ಇದು ಕೂಡ ಅವರ ನಿರ್ಧಾರಕ್ಕೆ ಅಂತಿಮವಾಗುತ್ತದೆ. ಅಲ್ಲದೇ ನಿಗಮ ಮಂಡಳಿ ನೇಮಕವೂ ಕೂಡ ಪಕ್ಷದ ಮುಖಂಡರ ಸೂಚನೆಯಂತೆಯೇ ಆಗಿದೆ. ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಮಾಜಿ ಸಚಿವರ ನಿವಾಸದಲ್ಲಿ ನಡೆದ ಸಭೆಗೆ ಕುರಿತು ಪ್ರತಿಕ್ರಿಯೆ ನೀಡಿದ ಮಂಜು ಅವರು, ಇದು ಕೇವಲ ಆಪ್ತ ಗೆಳೆಯರ ಸಭೆ ಮಾತ್ರ ಸಾಮಾನ್ಯವಾಗಿ ಭೇಟಿ ಮಾಡುತ್ತೇವೆ ಅಷ್ಟೇ ಎಂದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರದ ಟಿ.ಬಿ ಜಯಚಂದ್ರ, ಮಹದೇವಪ್ಪ, ಚಲುವರಾಯಸ್ವಾಮಿ, ಪಿರಿಯಪಟ್ಟಣ ಮಾಜಿ ಶಾಸಕರಾದ ವೆಂಕಟೇಶ್, ಮಂಜುನಾಥ್ ಸೇರಿದಂತೆ ಕಳೆದ ಚುನಾವಣೆಯಲ್ಲಿ ಸೋತ ಮೈಸೂರು, ಹಾಸನ, ಮಂಡ್ಯ ಹಾಗೂ ತುಮಕೂರು ಭಾಗದ ಮಾಜಿ ಶಾಸಕರು ಹಾಗೂ ಸಚಿವರುಗಳು ಭಾಗವಹಿಸಿದ್ದರು. ಈ ವೇಳೆ ಜೆಡಿಎಸ್ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv