ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Om Prakash) ಹತ್ಯೆಗೆ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಒಂದು ವಾರದಿಂದ ಪ್ಲ್ಯಾನ್ ಮಾಡಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಓಂ ಪ್ರಕಾಶ್ ಒಂದಷ್ಟು ದಿನ ಬೇರೆ ಕಡೆ ಇದ್ದರು. ನಂತರ ಬಲವಂತವಾಗಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಗೆ ಕರೆದುಕೊಂಡು ಬಂದ ನಂತರವೂ ಗಲಾಟೆ ನಡೆದಿತ್ತು. ಗಲಾಟೆ ಜೋರಾದ ಕಾರಣ ಓಂ ಪ್ರಕಾಶ್ ಅವರು ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಶುಕ್ರವಾರ ಪುತ್ರಿ ಕೃತಿ ಸರಿತಾ ಅವರ ಮನೆಗೆ ಹೋಗಿ ಪೀಡಿಸಿ ಕರೆ ತಂದಿದ್ದಳು.
ಮನೆಗೆ ಕರೆ ತಂದ ಬಳಿಕ ಮತ್ತೆ ಗಲಾಟೆ ನಡೆದಿದೆ. ಗಲಾಟೆ ನಡೆಯುತ್ತಿದ್ದಂತೆ ಈ ಮನುಷ್ಯನನ್ನು ಹೇಗಾದರೂ ಮಾಡಿ ಮುಗಿಸಿಬಿಡಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಈ ಪ್ಲ್ಯಾನ್‌ನಂತೆ ಭಾನುವಾರ ಮಧ್ಯಾಹ್ನ ಮತ್ತೆ ಗಲಾಟೆ ಮಾಡಿದ್ದಾರೆ.
ಗಲಾಟೆಯ ಬಳಿಕ ಓಂ ಪ್ರಕಾಶ್ ಅವರು ಊಟಕ್ಕೆ ಎರಡು ಮೀನು ತರಿಸಿದ್ದರು. ಮಧ್ಯಾಹ್ನ ಮೀನಿನ ಊಟ ಮಾಡುತ್ತಿದ್ದಾಗ ಪಲ್ಲವಿ (Pallavi) ಮತ್ತು ಕೃತಿ ದಾಳಿ ನಡೆಸಿ ಓಂ ಪ್ರಕಾಶ್ ಅವರನ್ನು ಹತ್ಯೆ ಮಾಡಿರುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಕೇಸ್ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?
ಕೊಲೆ ಹೇಗಾಯ್ತು?
ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ (ಹೊಸೂರು ಸರ್ಜಾಪುರ ಲೇಔಟ್) ನಿವಾಸದಲ್ಲಿ ಮಧ್ಯಾಹ್ನ ಊಟಕ್ಕೆ ಓಂ ಪ್ರಕಾಶ್ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ (Murder) ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಪೊಲೀಸರು (Police) ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂ ಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.