ಮೋದಿ ಚಿಂತನೆಯಿಂದ ಸ್ಫೂರ್ತಿಯಾಗಿ ಬಿಜೆಪಿ ಸೇರಿದ್ದೇನೆ: ಗೌತಮ್ ಗಂಭೀರ್

Public TV
1 Min Read
Gautam Gambhir

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿಯ ದೆಹಲಿ ಕಚೇರಿಯಲ್ಲಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಹಾಗೂ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಗೌತಮ್ ಗಂಭೀರ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೌತಮ್ ಗಂಭೀರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಬಳಿಕ ಮಾತನಾಡಿದ ಗೌತಮ್ ಗಂಭೀರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆಗಳಿಗೆ ನಾನು ಸ್ಫೂರ್ತಿಗೊಂಡಿರುವೆ. ಪಕ್ಷಕ್ಕೆ ಸೇರಲು ಅವಕಾಶ ನೀಡಿದಕ್ಕೆ ನಾನು ಧನ್ಯವಾದಗಳು ಎಂದು ಹೇಳಿದರು.

ಈ ಮೂಲಕ 37 ವರ್ಷದ ಗೌತಮ್ ಗಂಭೀರ್ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಗೌತಮ್ ಗಂಭೀರ್ ಅವರು ದೆಹಲಿಯ ರಾಜಿಂದರ್ ನಗರದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರೆ, ಹಾಲಿ ಸಂಸದೆ ಮೀನಾಕ್ಷಿ ಲೇಖಿ ಅವರ ನವದೆಹಲಿ ಕ್ಷೇತ್ರವನ್ನು ಗೌತಮ್ ಗಂಭೀರ್ ಅವರಿಗೆ ಬಿಟ್ಟುಕೊಡಲು ಹೈಕಮಾಂಡ್ ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಛತ್ತೀಸ್‍ಗಢ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್ ಸೇರಿದಂತೆ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಗುರುವಾರ ಪ್ರಕಟಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗಾಂಧಿನಗರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸುತ್ತಿದ್ದು, ಗೌತಮ್ ಗಂಭೀರ್ ಅವರಿಗೆ ಅವಕಾಶ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಲೋಕಸಭಾ ಚುನಾವಣೆ ಸ್ಪರ್ಧೆಗೆ ನಿರಾಕರಿಸಿದ್ದಾರೆ. ಬಿಜೆಪಿ ಸಂಸದ ಪರ್ವೇಶ್ ವರ್ಮ ಅವರ ಕ್ಷೇತ್ರವಾದ ಪಶ್ಚಿಮ ದೆಹಯಿಂದ ವೀರೇಂದ್ರ ಸೆಹ್ವಾಗ್ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿತ್ತು. ಆದರೆ ಸೆಹ್ವಾಗ್ ಟಿಕೆಟ್ ನಿರಾಕರಿಸಿದ್ದಾರೆ. ಇತ್ತ ಗೌತಮ್ ಗಂಭೀರ್ ಅವರು ಪಕ್ಷ ಸೇರಲು, ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಇತ್ತೀಚೆಗಷ್ಟೆ ದೆಹಲಿ ಬಿಜೆಪಿ ಮುಖಂಡರು ಮಾಧ್ಯಮಗಳಿಗೆ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *