ನವದೆಹಲಿ: ಹಿರಿಯ ನಾಯಕರಿಂದ ಕಿರುಕುಳದ ಗಂಭೀರ ಆರೋಪ ಮಾಡಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಎಐಸಿಸಿ ವಕ್ತಾರೆ, ರಾಜಸ್ಥಾನದ ಕಾಂಗ್ರೆಸ್ (Congress) ನಾಯಕಿ ರಾಧಿಕಾ ಖೇರಾ (Radhika Khera) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಬಿಜೆಪಿ (BJP) ಸೇರ್ಪಡೆ ಬಳಿಕ ಮಾತನಾಡಿದ ಅವರು, ರಾಮನ ಭಕ್ತೆ ಎಂಬ ಕಾರಣಕ್ಕೆ, ರಾಮಲಲ್ಲಾನ ದರ್ಶನ ಪಡೆದಿದ್ದಕ್ಕೆ ಕೌಶಲ್ಯ ಮಾತೆಯ ಭೂಮಿಯಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ ರೀತಿ ಕರಾಳವಾಗಿದೆ. ಬಿಜೆಪಿ ಸರ್ಕಾರದ ರಕ್ಷಣೆ ಸಿಗದಿದ್ದರೆ ನಾನು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇಂದಿನ ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಆಗಿ ಉಳಿದಿಲ್ಲ. ಅದು ರಾಮ ವಿರೋಧಿ, ಹಿಂದೂ ವಿರೋಧಿಯಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿಷ್ಪ್ರಯೋಜಕ- SP ನಾಯಕ ವಿವಾದಾತ್ಮಕ ಹೇಳಿಕೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ರಾಧಿಕಾ ಖೇರಾ ಅವರು ರಾಮಮಂದಿರಕ್ಕೆ ಭೇಟಿ ಮತ್ತು ರಾಮಲಲ್ಲಾ ಮೂರ್ತಿಯ ದರ್ಶನ ಪಡೆಯುವುದರಿಂದ ಪಕ್ಷದೊಳಗೆ ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದ್ದರು. ಇದಕ್ಕೂ ಮುನ್ನ ಖೇರಾ ಅವರ ಬಗೆಗಿನ ಅಗೌರವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ವೀಡಿಯೊ ವೈರಲ್ ಆಗಿತ್ತು. ಪಕ್ಷದಲ್ಲಿ ಯಾರೂ ವಿಶೇಷವಾಗಿ ಮಹಿಳಾ ರಾಜಕಾರಣಿಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದ್ದರು.