ಬೆಂಗಳೂರು: ಪ್ರಜ್ವಲ್ ವಿದೇಶಕ್ಕೆ ಹೋಗುವುದಕ್ಕೆ ದೇವೇಗೌಡರೇ (H.D Deve Gowda) ಬಿಟ್ಟು ಈಗ ಪತ್ರ ಬರೆದರೆ ಏನು ಪ್ರಯೋಜನ ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಈ ಪ್ರಕರಣವನ್ನು ಜೀವಂತವಾಗಿ ಇಡಬೇಕು ಅನ್ನೋದು ಹೊರತುಪಡಿಸಿ ಇದರಲ್ಲಿ ಇರುವ ಸತ್ಯಾಂಶ, ವಾಸ್ತವಾಂಶ ಹೊರಗೆ ತರಬೇಕು ಎನ್ನುವುದು ಸಿಎಂ ಸೇರಿದಂತೆ ಯಾರಿಗೂ ಇಲ್ಲ. ದೇವೇಗೌಡರ ಬಗ್ಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾನು ಒಂದು ಪ್ರಶ್ನೆ ಮಾಡಿದ್ದೇನೆ. ನಿಮ್ಮ ಮಗ ವಿದೇಶಕ್ಕೆ ಹೋಗಿದ್ದಾಗ ದುರ್ಘಟನೆ ನಡೀತು. ಅವರು ಯಾವ ಕಾರ್ಯಕ್ರಮಕ್ಕೆ ಹೋಗಿದ್ರು? ಅವತ್ತು ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ತೆಗೆದುಕೊಂಡು ಹೋಗಿದ್ರಾ? ಇವರ ಮಗನ ಜೊತೆ ಯಾರ್ ಯಾರು ಹೋಗಿದ್ರು ಎಷ್ಟು ಜನ ಹೋಗಿದ್ರು? ಅಲ್ಲಿ ನಡೆದ ಘಟನೆ ಏನು ಎಂದು ಯಾಕೆ ತನಿಖೆ ಮಾಡಲಿಲ್ಲ? ತನಿಖೆ ಮಾಡದೇ ಆ ವಿಷಯ ಯಾಕೆ ಮುಚ್ಚಿಟ್ರಿ? ವಿದೇಶಕ್ಕೆ ಅವತ್ತು ನಿಮ್ಮ ಮಗನನ್ನ ನೀವೇ ಅನುಮತಿ ಕೊಟ್ಟು ಕಳಿಸಿದ್ರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬೆಳೆದ ಮಕ್ಕಳು ಪ್ರತಿ ಕುಟುಂಬದಲ್ಲಿ ಅವರ ತಂದೆ-ತಾಯಿ ಕೇಳಿ ಎಲ್ಲಾ ಮಾಡ್ತಾರಾ? ಇವತ್ತು ಬೆಳಗ್ಗೆ ಪೇಪರ್ ತೆಗೆದ್ರೆ ಬರಿ ಕೊಲೆ, ಅತ್ಯಾಚಾರ, ಇಂತಹ ಕೆಟ್ಟ ವಿಷಯವೇ ಇರುತ್ತದೆ. ಈ ಪ್ರಕರಣವನ್ನು (Prajwal Revanna Case) ದೊಡ್ಡದು ಮಾಡಿ ನಮ್ಮ ಕುಟುಂಬದ ರಾಜಕೀಯವನ್ನ ಸಂಪೂರ್ಣವಾಗಿ ಮುಗಿಸುವ ಹುನ್ನಾರ ಮಾಡ್ತಿದ್ದೀರಾ? ಅದು ಹೊರತುಪಡಿಸಿ ಏನು ಮಾಡ್ತಿಲ್ಲ. ಪೆನ್‍ಡ್ರೈವ್ ಸೂತ್ರಧಾರಿ, ಮಾರುಕಟ್ಟೆಗೆ ಬಿಟ್ಟವರನ್ನು ಯಾರನ್ನಾದರೂ ಅರೆಸ್ಟ್ ಮಾಡಿದ್ದೀರಾ? ಪ್ರಕರಣದಲ್ಲಿ ಯಾರೇ ಇದ್ದರು ಶಿಕ್ಷೆ ಆಗಬೇಕು ಎಂದು ಮೊದಲ ದಿನದಿಂದ ಹೇಳಿದ್ದೇನೆ. ಒಬ್ಬ ರಾಜ್ಯದ ಮುಖ್ಯಮಂತ್ರಿ ಹೇಳ್ತಾರೆ ಪೆನ್‍ಡ್ರೈವ್ ಹಂಚಿಕೆ ಮಾಡಿರೋದು ಅಪರಾಧ ಅಲ್ಲ. ಅದಕ್ಕಿಂತ ದೊಡ್ಡ ಅಪರಾಧ ವಿಡಿಯೋ ಅಂತಾರೆ. ಆ ಹೆಣ್ಣು ಮಕ್ಕಳ ಚಿತ್ರವನ್ನು ಮಸುಕು ಮಾಡದೇ ಬೀದಿಗೆ ಬಿಟ್ಟಿದ್ದಾರೆ. ಅವರಿಗೆ ಏನ್ ನ್ಯಾಯ ಕೊಡ್ತೀರಾ? ಯಾವ ರೀತಿ ಆ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳ್ತೀರಾ? ಸರ್ಕಾರದಿಂದ ಏನ್ ಕೊಡೋಕೆ ಸಾಧ್ಯ. ಕುಟುಂಬದಲ್ಲಿ ಹೋಗಿರೋ ವಿಶ್ವಾಸದ ಕೊರತೆ, ಕುಟುಂಬದಲ್ಲಿ ಆಗಿರೋ ಅನಾಹುತ ಇದೆಲ್ಲ ನೀವು ಹೇಗೆ ಸರಿ ಮಾಡ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ.
ನಾಲ್ಕು ಗೋಡೆ ಮಧ್ಯೆ ನಡೆದಿರೋದು ಬೇರೆ. ಅದನ್ನ ಬೀದಿಗೆ ತಂದವರು ನೀವು. ಆ ಘಟನೆ ನಡೆದಿರೋದಕ್ಕೆ ಏನ್ ಮಾಹಿತಿ ಸಿಕ್ಕಿತ್ತು, ತಕ್ಷಣ ಆ ಕುಟುಂಬಗಳಿಗೆ ಸಮಸ್ಯೆ ಆಗದಂತೆ, ಮಾಡಿರೋನಿಗೆ ಶಿಕ್ಷೆಗೆ ಒಳಪಡಿಸಬೇಕಿತ್ತು ಅಲ್ಲವೇ? ಅದ್ಯಾವುದೂ ಮಾಡದೇ ಮಾತೆತ್ತಿದರೆ ಬ್ರದರ್ ಸ್ವಾಮಿ ಅಂತ ಮಾತಾಡ್ತೀರಾ. ನಿಮ್ಮ ಯೋಗ್ಯತೆಗೆ ಮಾನ ಮರ್ಯಾದೆ ಇದ್ದರೆ ನೀವು ಯಾವ ರೀತಿ ನಡೆದುಕೊಂಡು ಬಂದಿದ್ದೀರಾ? ನಿಮ್ಮ ಪಕ್ಷದ ಅಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳೋಕೆ ಬಯಸುತ್ತೇನೆ. ಮೊದಲು ನಿಮ್ಮ ಮನೆಯಲ್ಲಿ ಏನೇನಾಗಿದೆ ಮೊದಲು ಸರಿಪಡಿಸಿಕೊಳ್ಳಿ. ನಿಮ್ಮ ಪರಿಸ್ಥಿತಿ ಸರಿ ಮಾಡಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.