– ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತದೊಂದಿಗೆ ಇಬ್ಬಗೆಯ ಆಟ
ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಅವರ ಆಡಳಿತದ ಸಂದರ್ಭದಲ್ಲಿ ಅಮೆರಿಕ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಮೇಲೆ ನಿಯಂತ್ರಣ ಹೊಂದಿತ್ತು ಎಂದು ಮಾಜಿ ಕೇಂದ್ರ ಗುಪ್ತಚರ ಸಂಸ್ಥೆ (CIA) ಏಜೆಂಟ್ ಜಾನ್ ಕಿರಿಯಾಕೌ (John Kiriakou) ಗಂಭೀರ ಆರೋಪ ಮಾಡಿದ್ದಾರೆ.
CIA ಯಲ್ಲಿ ವಿಶ್ಲೇಷಕರಾಗಿ, ನಂತರ ಭಯೋತ್ಪಾದನಾ ನಿಗ್ರಹ ಘಟಕದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಾನ್ ಕಿರಿಯಾಕೌ, ಪರ್ವೇಜ್ ಮುಷರಫ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಒಂದು ಕಾಲದಲ್ಲಿ ಪರ್ವೇಜ್ ಮುಷರಫ್ ಸರ್ಕಾರವನ್ನ ಖರೀದಿಸಲು ಅಮೆರಿಕ ಹೇಗೆ ಪಾಕಿಸ್ತಾನಕ್ಕೆ ಲಕ್ಷಾಂತರ ರೂಪಾಯಿ ನೆರವು ನೀಡಿತ್ತು ಅನ್ನೋ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಪಾಕಿಸ್ತಾನವು (Pakistan) ಭ್ರಷ್ಟಾಚಾರದ ಅಡಿಯಲ್ಲಿ ಹೂತುಹೋಗಿದೆ. ಅಲ್ಲಿನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಂತಹ ನಾಯಕರು ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರೆ, ಇತ್ತ ದೇಶದ ಸಾಮಾನ್ಯ ನಾಗರಿಕರು ಬಳಲುತ್ತಿದ್ದರು ಎಂದು ಬೇಸರ ಹೊರಹಾಕಿದ್ದಾರೆ.
ನಾನು 2002 ರಲ್ಲಿ ಪಾಕಿಸ್ತಾನದಲ್ಲಿದ್ದಾಗ ಅಮೆರಿಕದ ಪೆಂಟಗನ್ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನ ನಿಯಂತ್ರಿಸುತ್ತಿದೆ ಎಂದು ನನಗೆ ಅನಧಿಕೃತ ಮೂಲಗಳಿಂದ ಗೊತ್ತಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ, ಪಾಕಿಸ್ತಾನಿಯರು ಇದನ್ನ ನಿರಾಕರಿಸಿದ್ದಾರೆ. ಪಾಕಿಸ್ತಾನಿ ಜನರಲ್‌ಗಳು ನಿಯಂತ್ರಣದಲ್ಲಿದ್ದರೆ, ರಾಜಕೀಯವಾಗಿ ಯಾರು ಉಸ್ತುವಾರಿ ವಹಿಸುತ್ತಾರೆ ಎಂಬುದರ ಬಗ್ಗೆ ನನಗೆ ತುಂಬಾ ಚಿಂತೆಯಾಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮುಷರಫ್ ಸರ್ಕಾರದೊಂದಿಗೆ ಅಮೆರಿಕವು ಉತ್ತಮ ಸಂಬಂಧ ಹೊಂದಿತ್ತು. ಆ ಸಂದರ್ಭದಲ್ಲಿ ನಮ್ಮ ಸಂಬಂಧಗಳೂ ಕೂಡ ಪಾಕ್ ಸರ್ಕಾರದೊಂದಿಗೆ ಚೆನ್ನಾಗಿತ್ತು. ಆದ್ರೆ ಅಮೆರಿಕ ಸರ್ವಾಧಿಕಾರಿಗಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತದೆ. ಏಕೆಂದ್ರೆ ಆಗ ನೀವು ಜನಾಭಿಪ್ರಾಯದ ಬಗ್ಗೆ ಚಿಂತಿಸಬೇಕಾಗಿಲ್ಲ, ಮಾಧ್ಯಮಗಳಿಗೂ ಹೆದರಬೇಕಿಲ್ಲ. ಆದ್ದರಿಂದ ಅಮೆರಿಕ ಮುಷರಫ್ ಅವರನ್ನ ಖರೀದಿ ಮಾಡಿತ್ತು. ಜೊತೆಗೆ ತನ್ನ ಭದ್ರತಾ ಆದ್ಯತೆಗಳನ್ನ ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಪರಮಾಣು ಶಸ್ತ್ರಗಾರದ ಮೇಲೆ ಹಿಡಿತ ಸಾಧಿಸಿತು ಅಂತ ಹೇಳಿದ್ದಾರೆ.
ಮಿಲಿಟರಿ ಹಾಗೂ ಆರ್ಥಿಕವಾಗಿಯೂ ಅಮೆರಿಕ ಪಾಕಿಸ್ತಾನಕ್ಕೆ ಮಿಲಿಯನ್ ಡಾಲರ್‌ಗಟ್ಟಲೇ ಸಹಾಯ ನೀಡಿತು. ಆಗ ಮುಷರಫ್ ಪೆಂಟಗನ್‌ಗೆ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಅಧಿಕಾರ ನೀಡಿದರು.
ಭಾರತದ ವಿರುದ್ಧ ಉಗ್ರ ಕೃತ್ಯಕ್ಕೂ ಸಾಥ್
ಮುಂದುವರಿದು ಮಾತನಾಡಿದ ಕಿರಿಯಾಕೌ, ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವ ವಿಚಾರದಲ್ಲಿ ಅವರು ಇಬ್ಬಗೆಯ ನೀತಿ ಹೊಂದಿದ್ದರು. ಒಂದು ಕಡೆ ಭಾರತದ ಬಗ್ಗೆ ಕಾಳಜಿ ವಹಿಸಿದಂತೆ ನಡೆದುಕೊಳ್ಳುತ್ತಿದ್ದರು. ಮತ್ತೊಂದು ಕಡೆ ಪಾಕ್ ಸೈನ್ಯ ಹಾಗೂ ಕೆಲವು ಉಗ್ರರನ್ನ ತೃಪ್ತಿಪಡಿಸಲು ಭಾರತದ ವಿರುದ್ಧದ ಭಯೋತ್ಪಾದನೆ ಕೃತ್ಯಗಳಿಗೆ ಸಾಥ್ ನೀಡುತ್ತಿದ್ದರು. ಈ ವಿಚಾರದಲ್ಲಿ ಅಮೆರಿಕನ್ನರೊಂದಿಗೆ ಸಹಕರಿಸುತ್ತಿರುವುದಾಗಿಯೂ ನಟಿಸುತ್ತಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



