ಹಾವೇರಿ: ರಷ್ಯಾ ಸೈನಿಕರ ದಾಳಿಗೆ ಖಾರ್ಕೀವ್‍ನಲ್ಲಿ ಮೃತರಾಗಿದ್ದ ನವೀನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಭೇಟಿ ನೀಡಿದ್ದಾರೆ.
Advertisement
ಹಾವೇರಿಯ ರಾಣೆಬೆನ್ನೂರಿನ ಚಳಗೇರಿಯಲ್ಲಿರುವ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ವಿದ್ಯಾರ್ಥಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ನವೀನ್ ಮೃತದೇಹ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬಸ್ಥರಿಗೆ ಭರವಸೆ ನಿಡಿದರು.
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಮೆಡಿಕಲ್ ಓಡಲು ಹೋಗಿದ್ದ ನವೀನ್ ನಾಲ್ಕನೇ ವರ್ಷದ ವಿದ್ಯಾರ್ಥಿ. ತಂದೆ-ತಾಯಿ ನವೀನ್ ಬಗ್ಗೆ ದೊಡ್ಡ ಆಸೆ ಇಟ್ಟುಕೊಂಡಿದ್ದರು. ದುರದೃಷ್ಟವಶಾತ್ ನವೀನ್ ಓದು ಮುಗಿಸಲು ಆಗಲಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತಪಟ್ಟಿದ್ದಾನೆ. ಮಾರ್ಚ್ 1 ರಂದು ಬಂಕರ್ ನಲ್ಲಿದ್ದವರಿಗೆ ತಿಂಡಿ ತರೋಕೆ ಹೋಗಿದ್ನಂತೆ. ಕ್ಯೂನಲ್ಲಿ ನಿಂತಾಗ ಆಗಿದ್ದಂತಹ ಶೆಲ್ ದಾಳಿಗೆ ನವೀನ್ ಬಲಿಯಾಗಿದ್ದಾನೆ. ಮೃತದೇಹ ಅಲ್ಲಿಯೇ ಇದೆ ಎಂದರು. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್
Advertisement
ಇನ್ನೂ ಬಾಳಿ ಬದುಕಬೇಕಾದ ಯುವಕ ನವೀನ್. ಸಮಾಜದಲ್ಲಿ ಆತನ ಮೇಲೆ ಹಲವು ನಿರೀಕ್ಷೆಗಳಿದ್ದವು. ಮೃತದೇಹ ತರುವ ಪ್ರಯತ್ನ ನಡೆಯುತ್ತಿವೆ. ಭಾರತ ಸರ್ಕಾರ ಕೂಡಲೇ ಮೃತದೇಹ ತರುವ ಪ್ರಯತ್ನ ಮಾಡಬೇಕು. ಸಂಬಂಧಿಸಿದವರಿಗೆ ಈ ಬಗ್ಗೆ ಮಾತನಾಡುವೆ. ಪ್ರಧಾನಮಂತ್ರಿಯವರಿಗೆ ಮೃತದೇಹ ತರಿಸುವ ಸಲುವಾಗಿ ಪತ್ರ ಬರೆಯುವೆ. ಕೋಳಿವಾಡರ ಪುತ್ರ ಅನುಮತಿ ಕೊಟ್ರೆ ತಮ್ಮ ವಿಮಾನದಲ್ಲಿ ಮೃತದೇಹ ತರುವುದಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಚಿಕ್ಕವಯಸ್ಸಿನ ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆತ ನಮ್ಮ ಮೈಸೂರಿನಲ್ಲಿ ಓದಿದ ಹುಡುಗ. ನಂಜನಗೂಡು ಪೇಪರ್ ಮಿಲ್ ನಲ್ಲಿ ಕೆಲಸ ಮಾಡ್ತಿದ್ರು ನವೀನ್ ತಂದೆ. ಮೃತ ನವೀನ್ ಅಣ್ಣ ಹರ್ಷ ಪಿಎಚ್‍ಡಿ ಮಾಡುತ್ತಿದ್ದಾನೆ. ನವೀನ್ ತಂದೆ-ತಾಯಿಗೆ ಬಹಳ ನೋವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ನೋವು ತಂದೆ-ತಾಯಿಗೆ ಕಾಡುತ್ತಿದೆ ಎಂದರು. ಇದನ್ನೂ ಓದಿ: ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ
ಇಲ್ಲಿ ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಸಿಗದ್ದಕ್ಕೆ ನವೀನ್ ಉಕ್ರೇನ್ ಗೆ ಹೋಗಿದ್ದ. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ರಾಜಕೀಯಕ್ಕೊಸ್ಕರ ಈ ಮಾತು ಹೇಳುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆಗುತ್ತದೆ ಎಂಬುದು ಮಾಹಿತಿ ಇತ್ತು. ಯುದ್ಧ ಪ್ರಾರಂಭದ ಮುಂಚೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಬೇರೆ ದೇಶದವರು ತಮ್ಮ ತಮ್ಮ ದೇಶದವರನ್ನ ಕರೆದುಕೊಂಡು ಹೋಗಿದ್ದಾರೆ. ಭಾರತ ದೇಶ ಮುಂಜಾಗ್ರತಾ ಕ್ರಮ ಕೈಗೊಂಡು ಅಲ್ಲಿನವರ ಕರೆದುಕೊಂಡು ಬರುವಲ್ಲಿ ಎಡವಿದೆ. ಅದನ್ನ ಮಾಡೋದರಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ. ಕೂಡಲೇ ನವೀನ್ ಮೃತದೇಹ ಭಾರತ ದೇಶಕ್ಕೆ ತರಿಸುವ ಕೆಲಸವನ್ನ ಮಾಡಬೇಕೆಂದು ಪ್ರಧಾನಿಯವರಿಗೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ ಎಂಬುದು ಗೊತ್ತಾಗುತ್ತದೆ. ವಿದೇಶಾಂಗ ಸಚಿವಾಲಯ ಜವಾಬ್ದಾರಿಯಿಂದ ಕೆಲಸ ಮಾಡಬೇಕಿತ್ತು. ಅವರು ಜಾಗೃತರಾಗಿದ್ದರೆ ನವೀನ್ ಜೀವ ಉಳಿಸಬಹುದಿತ್ತು. ನವೀನ್ ಮೃತದೇಹವನ್ನಾದರೂ ತರಿಸುವ ಕೆಲಸ ಮಾಡಬೇಕಿತ್ತು. 8-9 ದಿನಗಳ ಕಾಲ ವಿದ್ಯಾರ್ಥಿಗಳು ಬಂಕರ್ ನಲ್ಲಿ ಇದ್ದರಂತೆ. ಇದು ಬಹಳ ನೋವಿನ ಸಂಗತಿ. ಅಲ್ಲಿ ಓದಿ ಬಂದು ಹಳ್ಳಿನಲ್ಲಿ ಮಗ ಸೇವೆ ಮಾಡಬೇಕೆಂಬ ಆಸೆ ತಂದೆಯದಾಗಿತ್ತು. ಅದನ್ನ ಕೇಳಿ ಕರುಳು ಕಿತ್ತು ಬಂತು. ಯುವಕರು ದೇಶದ ಆಸ್ತಿ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯಗೆ ಮಾಜಿ ಸ್ಪೀಕರ್ ಕೋಳಿವಾಡ, ಮಾಜಿ ಸಚಿವ ಬಸವರಾಜ್ ಶಿವಣ್ಣನವರ್ ಹಾಗೂ ಗಣ್ಯರು ಸಾಥ್ ನೀಡಿದರು. ಇದನ್ನೂ ಓದಿ: ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು