ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತಿಲ್ಲ. ದೇಶವಿರೋಧಿಗಳ ರಕ್ಷಣೆ ಮಾಡುತ್ತಿದೆ. ಈ ಸರ್ಕಾರ ವಜಾವನ್ನು ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುತ್ತಿರುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ (Protest) ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ಸತ್ಯಕ್ಕೆ ದೂರವಾಗಿದೆ. ಈಗ ಪಾಕಿಸ್ತಾನ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತಾ ನೈತಿಕವಾಗಿಯೂ ದಿವಾಳಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಪಾಕ್ ಪರವಾಗಿ ಸರ್ಕಾರ ನಿಲ್ಲುತ್ತದೆ ಅಂದರೆ, ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಈ ಸರ್ಕಾರ ಎಷ್ಟು ಬೇಗ ತೊಲಗುತ್ತದೆ ರಾಜ್ಯಕ್ಕೆ ಅಷ್ಟು ಒಳ್ಳೆಯದಾಗುತ್ತದೆ. ಪಾಕಿಸ್ತಾನದ ಪರ ಘೊಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇವರು ಎಫ್ಎಸ್ಎಲ್ ವರದಿ ಕತೆ ಏಕೆ ಹೇಳುತ್ತಿದ್ದಾರೆ? ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.


ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದಾಗ ಎಫ್ಎಸ್ಎಲ್ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು. ಇದರಲ್ಲಿ ಏನೂ ಇಲ್ಲ ಅಂದರೆ ಪೊಲಿಸರು ಏಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ರಾಜ್ಯದ ಜನರು ಪಾಕಿಸ್ತಾನ ಪರವಾದವನ್ನು ಆಯ್ಕೆ ಮಾಡಿಲ್ಲ. ಇದು ಕನ್ನಡಿಗರ ಹಾಗೂ ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ











