ನವದೆಹಲಿ: ಇನ್ನೂ ಪ್ರಕಟವಾಗದ ತಮ್ಮ ಆತ್ಮಚರಿತ್ರೆಯ ಸುತ್ತ ಹೆಚ್ಚುತ್ತಿರುವ ವಿವಾದಗಳ ಮಧ್ಯೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ (MM Naravane) ಅವರು ಪ್ರಕಾಶಕರಾದ ಪೆಂಗ್ವಿನ್‌ನ ಹೇಳಿಕೆಯನ್ನು ಮರುಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ.
‘ಇದು ಪುಸ್ತಕದ ಸ್ಟೇಟಸ್’ ಎಂದು ಜನರಲ್ ನರವಾಣೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರಲ್ ನರವಾಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯ (Four Stars of Destiny) ವಿಶೇಷ ಪ್ರಕಾಶನ ಹಕ್ಕುಗಳ ಬಗ್ಗೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನಿನ್ನೆ ಸ್ಪಷ್ಟೀಕರಣವನ್ನು ನೀಡಿದ್ದು, ಆ ಪುಸ್ತಕವನ್ನು ಪ್ರಕಟಿಸಲಾಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ನರವಾಣೆ ಅಪ್ರಕಟಿತ ಪುಸ್ತಕ ವಿವಾದ| ಎಫ್‌ಐಆರ್ ದಾಖಲು, ನಾವು ಪ್ರಕಟಿಸಿಯೇ ಇಲ್ಲವೆಂದ ಪೆಂಗ್ವಿನ್ ಇಂಡಿಯಾ
ಹಸ್ತಪ್ರತಿಯ ಅನಧಿಕೃತ ಪ್ರತಿಗಳ ಪ್ರಸರಣದ ಆರೋಪದ ಕುರಿತು ಹೆಚ್ಚುತ್ತಿರುವ ವಿವಾದ ಮತ್ತು ಸಂಸತ್ತಿನಲ್ಲಿ ಎದ್ದಿರುವ ರಾಜಕೀಯ ವಿವಾದದ ನಡುವೆ ಈ ಹೇಳಿಕೆ ಬಂದಿದೆ. ಇನ್ನೂ ಅನುಮೋದನೆ ಪಡೆಯದ ಪ್ರಕಟಣೆಯಿಂದ ಅಕ್ರಮವಾಗಿ ವಿತರಿಸಲಾಗಿದೆ ಎಂದು ಶಂಕಿಸಲಾಗಿರುವ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಆತ್ಮಚರಿತ್ರೆಯ ಪ್ರತಿಗಳು ಡಿಜಿಟಲ್ ಮತ್ತು ಇತರ ಸ್ವರೂಪಗಳಲ್ಲಿ ಪ್ರಸಾರವಾಗುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೆಂಗ್ವಿನ್ ಸ್ಪಷ್ಟನೆ ನೀಡಿದೆ. ‘ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಆದರೆ, ಇನ್ನೂ ಪುಸ್ತಕ ಪ್ರಕಟಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪುಸ್ತಕದ ಯಾವುದೇ ಪ್ರತಿಗಳನ್ನು ಪ್ರಕಾಶಕರು ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ. ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: ಮೇಜರ್ ನರವಣೆ ʻಅಪ್ರಕಟಿತ ಆತ್ಮಚರಿತ್ರೆʼ ಎಬ್ಬಿಸಿದ ಬಿರುಗಾಳಿ – 2020 ಆಗಸ್ಟ್ 31ರ ರಾತ್ರಿಗೂ ಮುನ್ನ ಏನಾಯ್ತು?

