ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿ ಕಂಗಾಲಾಗಿರುವ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕರು, ವಿದ್ಯುನ್ಮಾನ ಮತ ಯಂತ್ರಗಳು ಹ್ಯಾಕ್ ಆಗಿವೆ ಎಂದು ಆರೋಪಿಸಿ ಹೈಕೋರ್ಟ್ ಮೊರೆಹೋಗಿದ್ದಾರೆ.
ಜಿಲ್ಲೆಯ ಕೆ.ಆರ್. ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ಮಂಗಳೂರು ದಕ್ಷಿಣ ಕ್ಷೇತ್ರದ ಜೆ.ಆರ್.ಲೋಬೊ, ಮಂಗಳೂರು ಉತ್ತರ ಕ್ಷೇತ್ರದ ಬಿ.ಎ.ಮೊಯಿದ್ದೀನ್ ಬಾವಾ ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಮತ ಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ನಮ್ಮಲ್ಲಿರುವ ಅನುಮಾನಗಳನ್ನ ನಿವಾರಣೆ ಮಾಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಮ್ಮ ಕ್ಷೇತ್ರದ ಇವಿಎಂ ಯಂತ್ರಗಳ ಕುರಿತು ಸೂಕ್ತ ತನಿಖೆ ಆಗಬೇಕು. ಆ ಮೂಲಕ ನಿಜವಾಗಿಯೂ ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಬಳಕೆಯಾದ ಇವಿಎಂ ಗಳ ಸಮಗ್ರ ತನಿಖೆ ನಡೆಯಬೇಕು. ಇವಿಎಂ ದುರ್ಬಳಕೆಯಿಂದ ನಮಗೆ ಸೋಲಾಗಿದೆ. ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ. ಹೀಗಾಗಿ ಪ್ರತಿಸ್ಪರ್ಧಿಗಳ ಆಯ್ಕೆಯನ್ನು ರದ್ದುಪಡಿಸಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಈ ನಾಲ್ವರ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದರು. ಮಂಗಳೂರು ದಕ್ಷಿಣ ಕ್ಷೇತ್ರದ ಜೆ.ಆರ್.ಲೋಬೊ ವಿರುದ್ಧ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿ.ಎ.ಮೊಯಿದ್ದೀನ್ ಬಾವಾ ವಿರುದ್ಧ ಡಾ.ಭರತ್ ಶೆಟ್ಟಿ, ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಎಂ.ಕೆ.ಸೋಮಶೇಖರ್ ವಿರುದ್ಧ ಎಸ್.ಎ.ರಾಮದಾಸ್, ಚಾಮರಾಜ ಕ್ಷೇತ್ರದಲ್ಲಿ ಶ್ರೀ ವಾಸು ವಿರುದ್ಧ ಎಲ್.ನಾಗೇಂದ್ರ ಗೆದ್ದಿದ್ದರು.