Lok Sabha Polls: ಪ್ರತಿ ಮತ, ಪ್ರತಿ ಧ್ವನಿಯೂ ಮುಖ್ಯ – ಮತದಾನ ಹಕ್ಕು ಚಲಾಯಿಸಲು ಮೋದಿ ಕರೆ

Public TV
3 Min Read
Ajith Kumar

ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದ್ದು, ಎಲ್ಲೆಡೆ ಜನರಲ್ಲಿ ಉತ್ಸಾಹ ಕಂಡುಬಂದಿದೆ.

ಸ್ಟಾರ್‌ ನಟ, ನಟಿಯರೂ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ತಮ್ಮ ಮತದಾನದ ಹಕ್ಕು ಚಲಾಯಿಸಿ ಘನತೆ ಮೆರೆದಿದ್ದಾರೆ. ಅಲ್ಲದೇ ಇತರರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದ್ದಾರೆ. ತಮಿಳು ಸ್ಟಾರ್‌ ನಟರಾದ ಧನುಷ್‌, ವಿಜಯ್‌ ಸೇತುಪತಿ, ರಜನಿಕಾಂತ್‌, ಅಜಿತ್‌ ಕುಮಾರ್‌, ತ್ರಿಶಾ ಕೃಷ್ಣನ್‌, ಸಿಎಂ ಎಂ.ಕೆ ಸ್ಟಾಲಿನ್‌, ಅಣ್ಣಾಮಲೈ, ಖುಷ್ಬು ಸುಂದರ್‌ ದಂಪತಿ ಸೇರಿದಂತೆ ಅನೇಕರು ಮತದಾನ ಮಾಡಿದ್ದಾರೆ. ಇದನ್ನೂ ಓದಿ: ನಿತಿನ್‌ ಗಡ್ಕರಿ, ಕನಿಮೊಳಿ, ಅಣ್ಣಾಮಲೈ; ಮೊದಲ ಹಂತದ ಚುನಾವಣೆಯ ಪ್ರಮುಖ ಸ್ಪರ್ಧಿಗಳು ಯಾರ‍್ಯಾರು?

MK Stalin

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾನಕ್ಕೆ ಕರೆಕೊಟ್ಟಿದ್ದಾರೆ. ಎಕ್ಸ್‌ ಮೂಲಕ ತಮಿಳಿನಲ್ಲಿ ಸಂದೇಶ ನೀಡಿರುವ ಪ್ರಧಾನಿ ಮೋದಿ, ಲೋಕಸಭೆ ಚುನಾವಣೆ 2024 ಇಂದಿನಿಂದ ಆರಂಭವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ 102 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈ ಕ್ಷೇತ್ರಗಳಲ್ಲಿರುವ ಎಲ್ಲ ಮತದಾರರು ದಾಖಲೆ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ವಿನಂತಿಸುತ್ತೇನೆ. ವಿಶೇಷವಾಗಿ ಯುವಕರು ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಏಕೆಂದರೆ ಪ್ರತಿ ಮತವೂ ಪ್ರತಿ ಧ್ವನಿಯೂ ಮುಖ್ಯ ಎಂದು ಬರೆದುಕೊಂಡಿದ್ದಾರೆ.

nitin gadkari annamalai Kanimozhi

18 ಲಕ್ಷ ಸಿಬ್ಬಂದಿ ನಿಯೋಜನೆ:
ಮತದಾನದ ಹಿನ್ನಲೆ ಕೇಂದ್ರ ಚುನಾವಣಾ ಆಯೋಗ ಎಲ್ಲ ತಯಾರಿ ಮಾಡಿಕೊಂಡಿದೆ. 102 ಕ್ಷೇತ್ರಗಳ ಪೈಕಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆಯಲಿದೆ. ವ್ಯವಸ್ಥಿತ ಚುನಾವಣೆಗಾಗಿ 1.87 ಲಕ್ಷ ಮತಗಟ್ಟೆಗಳ ನಿರ್ಮಾಣ ಮಾಡಿದ್ದು, 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಿದೆ. ಇದನ್ನೂ ಓದಿ: Lok Sabha Polls: ಇಂದು ಮೊದಲ ಹಂತದ ಮತದಾನ- ಬೆಂಗಳೂರಿನಿಂದ ತಮಿಳುನಾಡಿನತ್ತ ಮತದಾರರು

8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿಗಳು ಸೇರಿ ಒಟ್ಟು 16.63 ಕೋಟಿ ಮತದಾರರು ಮೊದಲ ಹಂತದಲ್ಲಿ ಮತದಾನಕ್ಕೆ ಅರ್ಹರಾಗಿದ್ದಾರೆ. ಇದರಲ್ಲಿ 3.51 ಕೋಟಿ ಯುವ ಮತದಾರರಿದ್ದು 35.67 ಲಕ್ಷ ಯುವ ಸಮೂಹ ಮೊದಲ ಸಲ ವೋಟಿಂಗ್ ಮಾಡಿದರೆ 14.14 ಲಕ್ಷ 85+ ವಯಸ್ಸಿನ ಹಿರಿಯ ಮತದಾರರು ತಮ್ಮ ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಸೇರಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಚುನಾವಣಾ ಕಾರ್ಯಗಳಿಗೆ 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಅಕ್ರಮ ತಡೆಯಲು 127 ಸಾಮಾನ್ಯ, 67 ಪೊಲೀಸ್, 167 ಖರ್ಚು ವೆಚ್ಚ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರನ್ನ ಆಯೋಗ ನೇಮಕ ಮಾಡಿದೆ.

ಚುನಾವಣೆ ನಡೆಯುತ್ತಿರುವ ರಾಜ್ಯಗಳು
ತಮಿಳುನಾಡಿನ ಎಲ್ಲ 39, ಉತ್ತರಾಖಂಡದ ಎಲ್ಲ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದ ಎಲ್ಲ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ 7 ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಜೂನ್‌ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Share This Article