ಶಿವಮೊಗ್ಗ: ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಭದ್ರಾ ಅಭಯಾರಣ್ಯದಲ್ಲಿ (Bhadra Sanctuary) ಆನೆ ಶಿಬಿರ (Elephant Camp) ಸ್ಥಾಪಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಘೋಷಿಸಿದ್ದಾರೆ.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಆನೆಗಳಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆ ವಿಹಾರಧಾಮ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾವು ದಾಳಿ ಮಾಡುವ ಮೊದಲೇ ಅಪರಾಧ ಕೃತ್ಯಗಳನ್ನ ಬಿಟ್ಟುಬಿಡಿ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್
ಈ ಆನೆ ವಿಹಾರಧಾಮದ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಸಸ್ಯಗಳನ್ನು ಬೆಳೆಸಲಾಗುವುದು. ಇದರ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಲಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರೈತರನ್ನು ಒಕ್ಕಲೆಬ್ಬಿಸದಂತೆ ಸಚಿವರಿಗೆ ರೈತರಿಂದ ಮನವಿ ಸಲ್ಲಿಸಲಾಯಿತು. ಇದರೊಂದಿಗೆ ಕಾಡಾನೆ ದಾಳಿಗೆ ಸಾವನ್ನಪ್ಪಿರುವ ವ್ಯಕ್ತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಕಾಡಾನೆಯಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು. ಕಾಡಾನೆಗಳನ್ನು ಗ್ರಾಮಗಳಿಗೆ, ರೈತರ ಜಮೀನಿಗೆ ಬರದಂತೆ ತಡೆಯಲು ಕ್ರಮವಹಿಸಬೇಕು ಎಂದು ರೈತರು ಮನವಿ ಮಾಡಿದರು. ಇದನ್ನೂ ಓದಿ: ಬೆಂಗ್ಳೂರಿನ ಮೂರು ಕಾಲೇಜುಗಳಿಗೆ ಬಾಂಬ್ ಬೆದರಿಕೆ – ಪೊಲೀಸರಿಂದ ತೀವ್ರ ಶೋಧ