ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಬೊಗಳೆ ಹೊಡೆಯೋರು, ಪುಂಗಿದಾಸ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರು ಟೀಕಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕು ಮೊಟೇಬೆನ್ನೂರಿನ ಶಿಕ್ಷಣಸಂಸ್ಥೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ರಾಜೀನಾಮೆ ನೀಡಲಿ, ನಾನು ಶಿವಮೊಗ್ಗ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೇನೆ. ಬಳಿಕ ಇಬ್ಬರು ನಮ್ಮ ನಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತೇವೆ. ಬಾದಾಮಿಯಲ್ಲಿ ಅವರ ವಿರುದ್ಧ ನಮ್ಮ ಪಕ್ಷದ ಅಭ್ಯರ್ಥಿ ಹಾಕುತ್ತೇವೆ. ಅವರು ನಮ್ಮ ವಿರುದ್ಧ ಅವರ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಜನ ಯಾರ ಪರ ಇದ್ದಾರೆ ಅಂತ ಆಗ ಗೊತ್ತಾಗುತ್ತೆ. ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷವೇ ಗೆಲ್ಲದಿದ್ದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತದಿಂದ ಯಾಕೆ ಸೋತರು? ಶಿವಮೊಗ್ಗದ ಜನ ಐತಿಹಾಸಿಕವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಪಾಪ ಬಾದಾಮಿ ಜನರಿಗೆ ಸಿದ್ದರಾಮಯ್ಯ ಅವರ ವಿಚಾರ ಗೊತ್ತಿಲ್ಲ ಅದಕ್ಕೆ ಮೊದಲ ಬಾರಿ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯ ಬೊಗಳೆ ಹೊಡೆಯುತ್ತಾರೆ, ಪುಂಗಿದಾಸ ಅಂತ ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮಾತಿಗೆ ಬೆಲೆಯಿಲ್ಲ. ಅವರು ಸುಮ್ಮನೆ ನಾನು ಇಂದೂ ಸಿಎಂ, ಮುಂದೂ ಸಿಎಂ ಅಂತ ಹೇಳುತ್ತಾರೆ ಅಷ್ಟೇ. ಬಿಜೆಪಿಗೆ ಅಧಿಕಾರ ಸಿಗಬಾರದು ಅಂತ ಮೈತ್ರಿ ಸರ್ಕಾರ ಮಾಡಿದರು. ಆದ್ರೆ ಪಾಪ ಈಗ ಸಿಎಂ ಕುಮಾರಸ್ವಾಮಿ ಅವರ ಪರಿಸ್ಥಿತಿ ನೋಡೋದಕ್ಕೆ ಆಗ್ತಿಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv