DistrictsKarnatakaLatestMain PostShivamogga

ಸಿದ್ದರಾಮಯ್ಯನವರಿಗೆ ಪಾಠ ಮಾಡಲು ನಾನು ಎಲ್‍ಕೆಜಿ ಟೀಚರ್ ಅಲ್ಲ: ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯನವರಿಗೆ ಪಾಠ ಮಾಡಲು ನಾನು ಎಲ್‍ಕೆಜಿ ಟೀಚರ್ ಅಲ್ಲ. ಇಂತಹ ವ್ಯಕ್ತಿಗಳು ಯಾಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಿತ್ತು. ಸೋತ ಬಳಿಕ ಸಿದ್ದರಾಮಯ್ಯ ಬಹಳ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ. ಇವರ ಪಾಠ ರಾಜ್ಯದ ಜನ ಒಪ್ಪಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ, ಸಾಲದಲ್ಲಿಯೇ ಮುಳುಗಿ, ಸಾಲದಲ್ಲಿಯೇ ಏಳುತ್ತದೆ ಎಂದು ಹೇಳಿದ್ದರು. ಈ ಕುರಿತಂತೆ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಸಿಎಂ ಆದಾಗ ವಜ್ರ ವೈಡೂರ್ಯಗಳನ್ನು ರಸ್ತೆಯ ಮೇಲೆ ಮಾರಾಟ ಮಾಡಲಾಗುತ್ತಿತ್ತಾ? ಯಾರೂ ಮನೆಗೆ ಬೀಗ ಹಾಕಲಾಗುತ್ತಿರಲಿಲ್ವಾ. ವಿಜಯನಗರ ಸಾಮ್ರಾಜ್ಯವಾಗಿತ್ತಾ? ಈಗ ಮಾತ್ರ ಸಾಲ ಮಾಡಲಾಗುತ್ತಿದೆಯಾ? ತಾನೂ ಮುಖ್ಯಮಂತ್ರಿ ಆಗಿದ್ದಾಗ ಒಂದು ರೂಪಾಯಿನೂ ಸಾಲಮಾಡಿಲ್ಲವೆಂದು ಹೇಳಲಿ ನೋಡೋಣ. ಸರ್ಕಾರ ಎಂದಾಗ ಸಾಲ ಮಾಡುವುದು ಇರುತ್ತದೆ. ತೀರಿಸುವುದು ಇರುತ್ತದೆ. ಸಿದ್ದರಾಮಯ್ಯನವರಿಗೆ ಪಾಠ ಮಾಡಲು ನಾನು ಎಲ್‍ಕೆಜಿ ಟೀಚರ್ ಅಲ್ಲ. ಇಂತಹ ವ್ಯಕ್ತಿಗಳು ಯಾಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಿತ್ತು. ಸೋತ ಬಳಿಕ ಸಿದ್ದರಾಮಯ್ಯ ಬಹಳ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ. ಇವರ ಪಾಠ ರಾಜ್ಯದ ಜನ ಒಪ್ಪಲ್ಲ. ನಿಮ್ಮ ಅಧಿಕಾರದ ಅವಧಿಯಲ್ಲಿ ಮಾಡಬಾರದ ತಪ್ಪು ಮಾಡಿದ್ದೀರಾ. ಅದಕ್ಕಾಗಿ ಜನ ಸೋಲಿಸಿದ್ದಾರೆ. ಈಗ ನಿಮ್ಮ ಪಕ್ಷದ ಸಂಘಟನೆ ಮಾಡಿ, ವಿರೋಧ ಪಕ್ಷದವರಾಗಿ ಸರ್ಕಾರದ ತಪ್ಪು ಏನಂತ ತಿಳಿಸಿ. ಬೇಕಾದರೆ ಹೋರಾಟ ಮಾಡಿ. ಕೋವಿಡ್ ಹೋಗುವವರೆಗೂ ತಡೆದುಕೊಳ್ಳಿ. ಈಗ ಮೇಕೆದಾಟು ಪಾದಯಾತ್ರೆ ಬಿಟ್ಟು ಮಹದಾಯಿ ಹಿಡಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮಹದಾಯಿ ಹೋರಾಟ ನಮ್ಮ ಹೋರಾಟವೆಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಎದೆ ಮುಟ್ಟಿಕೊಂಡು ಹೇಳಲಿ. ಈ ಹಿಂದೆ ಸೋನಿಯಾಗಾಂಧಿ ಅವರು ಗೋವಾ ಚುನಾವಣೆ ಸಂದರ್ಭದಲ್ಲಿ ಮಹದಾಯಿಯ ಒಂದು ಹನಿಯನ್ನು ಕರ್ನಾಟಕಕ್ಕೆ ನೀಡಲ್ಲ ಅಂದಿದ್ದರು. ಇದನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ಇಲ್ಲವೆಂದು ಹೇಳಲಿ ನೋಡೋಣ, ಕಾಂಗ್ರೆಸ್ ಪಕ್ಷ ಮಹದಾಯಿ ವಿರುದ್ಧವೆಂಬುದು ಸಾಬೀತಾಗುತ್ತದೆ. ಸೋನಿಯಾ ಗಾಂಧಿ ಈಗಲಾದರೂ ಸಾಬೀತುಪಡಿಸಲಿ ಕಾಂಗ್ರೆಸ್ ಮಹದಾಯಿ ವಿರುದ್ಧವಿಲ್ಲ ಎಂದು ಸವಾಲೊಡ್ಡಿದರು. ಇದನ್ನೂ ಓದಿ: ನನ್ನ ಜೊತೆ ಬಿಜೆಪಿ, ಜೆಡಿಎಸ್‍ನ ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ

ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರ: ಈ ಬಗ್ಗೆ ಚರ್ಚೆ ಮುಂದುವರೆಸುವುದು ನಿಲ್ಲಿಸಿ, ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ಮನವಿ ಮಾಡುತ್ತೇನೆ. ಉಸ್ತುವಾರಿ ಬದಲಾಯಿಸಿರುವುದು ಸ್ವಾಗತಾರ್ಹ. ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಈ ರೀತಿ ನಡೆದಿತ್ತು. ನಾನು ಈ ಹಿಂದೆ ಬಿಜಾಪುರ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ನಾನು ನನ್ನ ಜಿಲ್ಲೆಯಲ್ಲಿಯೇ ಇರಬೇಕೆಂಬ ದಾಟಿಯ ಮಾತುಗಳು ಇಲ್ಲಿಗೆ ನಿಲ್ಲಿಸಿ. ದೇವರ ಪಲ್ಲಕ್ಕಿಯನ್ನು ಎಡಗಡೆ ಹೊತ್ತರೇನೂ? ಬಲಗಡೆ ಹೊತ್ತರೇನು? ಪಲ್ಲಕ್ಕಿ ಪಲ್ಲಕ್ಕಿನೇ. ನನಗೆ ಅದೇ ಜಿಲ್ಲೆ ಬೇಕು ಮತ್ತು ಇದೇ ಜಿಲ್ಲೆ ಬೇಕು ಎಂಬ ವಾದ ಬೇಡ. ಬೇರೆ ಜಿಲ್ಲೆಗಳ ಪರಿಸ್ಥಿತಿ ತಿಳಿದುಕೊಳ್ಳಲಾಗಿದೆ. ಈ ಜಿಲ್ಲೆ ಆಯಾ ಜಿಲ್ಲೆಗಳ ಪರಿಸ್ಥಿತಿ ತಿಳಿದುಕೊಂಡಂತೆ ಆಗುತ್ತದೆ. ಚುನಾವಣೆ ಹತ್ತಿರದಲ್ಲಿರುವಾಗ ಆಯಾ ಜಿಲ್ಲಾ ಪರಿಸ್ಥಿತಿ, ಕಾರ್ಯಕರ್ತರ ಅಭಿಲಾಷೆ ತಿಳಿದುಕೊಂಡತಾಗುತ್ತದೆ. ಆಯಾ ಜಿಲ್ಲೆಯ ಉಸ್ತುವಾರಿಗಳು ಸಮೀಕ್ಷೆ ಮಾಡಿ ವರದಿ ನೀಡುತ್ತಾರೆ. ಆ ಜಿಲ್ಲೆಯ ಸಂಘಟನೆ ಮತ್ತು ಅಭಿವೃದ್ಧಿಯ ಬಗ್ಗೆ ಉಸ್ತುವಾರಿಗಳು ನೋಡಿಕೊಳ್ಳುತ್ತಾರೆ ಎಂದರು.

ಮಾಧುಸ್ವಾಮಿ, ಆರ್. ಅಶೋಕ್ ಜಿಲ್ಲಾ ಉಸ್ತುವಾರಿ ವಿವಾರ: ಮಾಧುಸ್ವಾಮಿ ಮತ್ತು ಆರ್ ಅಶೋಕ್ ಗೆ ಜಿಲ್ಲಾ ಉಸ್ತುವಾರಿ ನೀಡದಿರುವ ವಿಚಾರ. ಎಲ್ಲರಿಗೂ ಎಲ್ಲವೂ ಕೊಡಬೇಕೆಂದು ಇಲ್ಲ. ಸರ್ಕಾರದ ಮತ್ತು ಪಕ್ಷದ ಹಿತದೃಷ್ಠಿಯಿಂದ ನಮ್ಮ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಆ ತೀರ್ಮಾನಕ್ಕೆ ಅಶೋಕ್ ಮತ್ತು ಮಾಧುಸ್ವಾಮಿ ಬದ್ಧರಾಗಿರುತ್ತಾರೆ ಎಂದರು. ಜೊತೆಗೆ ನೆಮ್ಮದಿಯಾಗಿ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿಕೊಂಡು ಹೋಗೋಣ, ಈ ನಿಟ್ಟಿನಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತದೆ. ಸಭೆಗೆ ಬಂದರೆ ಸಂತೋಷ, ಬರದಿದ್ದರೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕೆಂಬ ಅಭಿಲಾಷೆ ಸಿಎಂ ಹೊಂದಿದ್ದಾರೆ ಎಂದು ವಿರೋಧ ಪಕ್ಷಗಳಿಗೆ ಕಿವಿ ಮಾತು ಹೇಳಿದರು. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

ಯತ್ನಾಳ್ ಹೇಳಿಕೆ ವಿಚಾರ: ಈ ಅಭಿಪ್ರಾಯ ಬಿಜೆಪಿಯದು ಅಲ್ಲ. ಯಾರಾದರೂ ಒಬ್ಬ ಶಾಸಕರು ಹೇಳಿದ್ದಾರಾ? ಅದು ಯತ್ನಾಳ್ ಅವರ ವೈಯುಕ್ತಿಕ ಅಭಿಪ್ರಾಯ. ಯತ್ನಾಳ್ ಮತ್ತು ರೇಣುಕಾಚಾರ್ಯ ಚರ್ಚೆ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸಭೆ ಯಾರು ಬೇಕಾದರೂ ನಡೆಸಬಹುದು. ನೆಗೆಟಿವ್ ಯೋಚನೆ ಮಾಡುವುದು ಬೇಡ. ಪಾಸಿಟಿವ್ ಯೋಚಿಸೋಣ. ಮುಂಬರುವ ಚುನಾವಣೆ ಬಗ್ಗೆ ಚರ್ಚೆ ಮಾಡಿರಬಹುದು. ಎಲ್ಲವೂ ಕೆಟ್ಟದಾಗಿ ಯೋಚನೆ ಮಾಡಿದರೆ ತಪ್ಪಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published.

Back to top button