ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿನ 35 ವಾರ್ಡುಗಳಲ್ಲಿಯೂ ಹಾಪ್‍ಕಾಮ್ಸ್ ಮಳಿಗೆ ತೆರೆಯಲು ಸಚಿವ ಈಶ್ವರಪ್ಪ ಇಂದು ಸೂಚನೆ ನೀಡಿದ್ದಾರೆ.
ಇಂದು ಹಾಪ್‍ಕಾಮ್ಸ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ನಿರ್ದೇಶಕರ ಸಭೆ ನಡೆಸಿದ ಈಶ್ವರಪ್ಪ ಅವರು ಸರ್ಕಾರದಿಂದ ಹೆಚ್ಚುವರಿಯಾಗಿ ದುಡಿಯುವ ಬಂಡಾವಳ ಕೊಡಿಸುವ ಬಗ್ಗೆ ಆಶ್ವಾಸನೆ ನೀಡಿದರು. ಅಲ್ಲದೇ ಸ್ಥಳದಲ್ಲಿಯೇ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದರು.
ನಗರದ 35 ವಾರ್ಡುಗಳ ಪೈಕಿ ಈಗಾಗಲೇ 15 ಮಳಿಗೆಗಳಿದ್ದು, ಉಳಿದ 20 ಮಳಿಗೆಗೆ ಪಾಲಿಕೆ ಮತ್ತು ಹಾಪ್‍ಕಾಮ್ಸ್ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಯಾರು ಹಾಪ್‍ಕಾಮ್ಸ್ ನಡೆಸಲು ಮುಂದೆ ಬರುವರೋ ಅವರಿಗೆ ಸ್ವಂತ ಖರ್ಚಿನಲ್ಲಿ ಮಳಿಗೆ ನಿರ್ಮಿಸಿ ಕೊಡಲು ಸೂಚಿಸಿದ್ದಾರೆ. ಸದ್ಯಕ್ಕೆ ನಗರದಲ್ಲಿ 15 ಹಾಪ್‍ಕಾಮ್ಸ್ ಮಳಿಗೆಗಳಿದ್ದು, ಉಳಿದ 20 ವಾರ್ಡುಗಳಲ್ಲಿ ಮಳಿಗೆ ತೆರೆಯಬೇಕು. ಈ ಮಳಿಗೆಗಳನ್ನು ಒಂದು ತಿಂಗಳಲ್ಲಿ ನಿರ್ಮಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಹಾಪ್‌ಕಾಮ್ಸ್‌ನ ಅಭಿವೃದ್ಧಿಗಾಗಿ 50 ಲಕ್ಷ ರೂ. ದುಡಿಯುವ ಬಂಡವಾಳದ ಅಗತ್ಯವಿದ್ದು, ಹಾಪ್‍ಕಾಮ್ಸ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣವೇ ಇದಕ್ಕಾಗಿ ಹಣ ಬಿಡುಗಡೆಗೆ ಸಭೆಯಲ್ಲಿಯೇ ಈಶ್ವರಪ್ಪ ಒತ್ತಾಯಿಸಿದರು. ಅಲ್ಲದೇ ಈ ಬಗ್ಗೆ ಸಚಿವ ನಾರಾಯಣಗೌಡರಿಗೂ ಕೂಡ ಮನವಿ ಮಾಡಿ ದುಡಿಯುವ ಬಂಡಾವಳ ಬಿಡುಗಡೆ ಮಾಡುವಂತೆ ಕೋರಿದರು.
ಶಿವಮೊಗ್ಗ ನಗರದ ಎಲ್ಲಾ ಬಡಾವಣೆಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ಸ್ಥಾಪಿತವಾಗಬೇಕೆಂಬ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ಕೂಡ ನೀಡಿ, ಅಲ್ಲಿನ ಪಾರ್ಕ್‍ಗಳಲ್ಲಿ ಮಳಿಗೆ ತೆರೆಯಲು ಸೂಚಸಿದರು. ತರಕಾರಿ ಮತ್ತು ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‍ಕಾಮ್ಸ್ ಮೂಲಕವೇ ನಾಗರೀಕರಿಗೆ ತಲುಪುವಂತೆ ಆಗಬೇಕು ಎಂದು ಸಚಿವರು ತಿಳಿಸಿದರು.