ಶಿವಮೊಗ್ಗ: ಹಿಜಬ್ ವಿಚಾರದಲ್ಲಿ ರಾಜ್ಯ ರಾಜಕಾರಣಕ್ಕೆ ಒಂದು ಕಪ್ಪು ಚುಕ್ಕೆ ರೂಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಹಿಜಬ್ ವಿಷಯದಲ್ಲಿ ಅಕ್ಷಮ್ಯ ಅಪರಾಧದ ಹೇಳಿಕೆ ನೀಡಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ರಾಜ್ಯದ ಜನತೆ ಕ್ಷಮೆ ಕೇಳಿ ಎನ್ನುವುದಿಲ್ಲ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಅಂತ ಆಗ್ರಹಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನಡವಳಿಕೆ, ಹಿಂದೂ ವಿರೋಧಿ ಹೇಳಿಕೆ. ಸಿದ್ದರಾಮಯ್ಯ ಅವರು ಬಹಳ ಬಂಡರಿದ್ದಾರೆ. ಯಾವ ಕಾರಣಕ್ಕೂ ಅವರು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಒಪ್ಪುತ್ತಾರಾ ಎನ್ನುವುದನ್ನು ತಿಳಿಸಬೇಕು. ಸಿದ್ದರಾಮಯ್ಯ ಅವರು ಹೇಳಿದ್ದು ಸರಿ ಎನ್ನುವುದಾದರೆ ಹೇಳಲಿ. ಡಿಕೆಶಿ ಅವರು ಈಗ ಬಾಯಿ ಬಿಡಬೇಕು ಎಂದರು. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದದ ಟಾಪ್ ತಂಡಗಳು
ಹಿಜಬ್ ವಿಚಾರದಲ್ಲಿ ಸಾಧು ಸಂತರನ್ನು ಸಿದ್ದರಾಮಯ್ಯ ಟೀಕಿಸಿದ್ದು ತಪ್ಪು ಎನ್ನುವುದಾದರೆ ಅವರನ್ನು ಪಕ್ಷದಿಂದ ವಜಾ ಮಾಡಿ. ಅವರು ವಿಪಕ್ಷ ನಾಯಕರಿದ್ದಾರೆ. ನಿಮ್ಮಿಂದ ವಜಾ ಮಾಡಲು ಸಾಧ್ಯವಾಗದಿದ್ದರೆ ಕೇಂದ್ರದ ನಾಯಕರ ಗಮನಕ್ಕೆ ತನ್ನಿ. ನಾನು ಸಹ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ವಜಾ ಮಾಡುವಂತೆ ಸೋನಿಯಾಗಾಂಧಿ ಹಾಗು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ಮೊದಲು ಸಿದ್ದರಾಮಯ್ಯ ಅವರನ್ನು ವಜಾ ಮಾಡಿ ಎಂದು ಒತ್ತಾಯಿಸಿದರು.
ನ್ಯಾಯಾಲಯದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಗೌರವ ಇಲ್ಲ. ಮುಸಲ್ಮಾನ್ ಹೆಣ್ಣು ಮಕ್ಕಳು ನಾವು ಶಿಕ್ಷಣ ಬಿಡುತ್ತೇವೆ. ಆದರೆ ಹಿಜಬ್ ಬಿಡುವುದಿಲ್ಲ ಎಂದಾಗ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಅಂತ ಒಂದು ಮಾತನ್ನಾದರೂ ಹೇಳಿದ್ದೀರಾ. ಆಗ ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ ಎಂದು ಹರಿಹಾಯ್ದರು. ಒಂದು ಕಡೆ ನ್ಯಾಯಾಲಯಕ್ಕೆ ಮತ್ತೊಂದೆಡೆ ಸಾಧು ಸಂತರಿಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಎಲ್ಲಿಯವರೆಗೆ ನೀವು ಮುಸಲ್ಮಾನ್ ಅವರನ್ನು ಸಂತೃಪ್ತಿ ಮಾಡಿಕೊಂಡು ಹೋಗುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೀದರ್‌ನ ಬ್ರಿಮ್ಸ್‌ನಲ್ಲಿ ಮಾರಾಮಾರಿ ಪ್ರಕರಣ – ಮೂವರು ಬಂಧನ
ಇಷ್ಟು ದಿನ ದೇಶ ಹಾಗು ರಾಜ್ಯದ ಜನರನ್ನು ಮೋಸ ಮಾಡಿ, ಇದೀಗ ನೆಲ ಕಚ್ಚಿದ್ದೀರಾ. ಮುಂದಿನ ದಿನಗಳಲ್ಲಿ ಅಡ್ರೆಸ್ ಇಲ್ಲದ ಹಾಗೆ ಹೋಗುತ್ತೀರಾ. ಕಾಂಗ್ರೆಸ್ ಅಷ್ಟೋ, ಇಷ್ಟೋ ಸ್ಥಾನ ಉಳಿಸಿಕೊಳ್ಳಬೇಕು ಅಂದರೆ ಮೊದಲು ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ವಜಾ ಮಾಡಿ. 2023ರ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ. ನಿಮ್ಮ ರಾಜಕಾರಣ ಇಂದೇ ಕೊನೆ ಮಾಡಿ. ಚುನಾವಣೆಗೆ ಸ್ಪರ್ಧಿಸಿದರೆ ಚಾಮುಂಡೇಶ್ವರಿಯಲ್ಲಿ ಸೋಲಿಸಿದ ರೀತಿ ಮತ್ತೊಮ್ಮೆ ಜನರೇ ನಿಮ್ಮನ್ನು ಸೋಲಿಸುತ್ತಾರೆ. ಜನರೇ ನಿಮ್ಮನ್ನು ಸೋಲಿಸಿ ಕೊನೆಯ ಚುನಾವಣೆ ಮಾಡಬೇಕೋ, ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಿ ಕೊನೆಯ ಚುನಾವಣೆ ಮಾಡಿಕೊಳ್ಳುತ್ತೀರಾ ನೀವೇ ನಿರ್ಧಾರ ಮಾಡಿ ಎಂದು ತಿಳಿಸಿದರು.