ಲಕ್ನೋ: 9 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಹೆಣ್ಣು ಹುಲಿಯನ್ನು ಗ್ರಾಮಸ್ಥರು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶ ಫಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದ ಹೆಣ್ಣು ಹುಲಿ ಸುಮಾರು 5ರಿಂದ 6 ವರ್ಷದ್ದಾಗಿದೆ. ಈ ಹುಲಿ ಫಿಲಿಭಿತ್ ಜಿಲ್ಲೆಯ ಮಟೈನಾ ಗ್ರಾಮದಲ್ಲಿ ಕಳೆದ ಬುಧವಾರ 9 ಜನರ ಮೇಲೆ ದಾಳಿ ಮಾಡಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ಗುರುವಾರವೂ 19 ವರ್ಷ ಶ್ಯಾಮ ಮೊಹನ್ ಮೇಲೆ ದಾಳಿ ಮಾಡಿತ್ತು.
After tigress mauled nine persons in Pilibhit, angry villagers beat big cat to death @UpforestUp @TigerReservePBT @TOIWestUP pic.twitter.com/GFXqlHwBdZ
— Priyangi Agarwal (@priyangiTOI) July 25, 2019
ಹುಲಿಯ ನಿರಂತರ ದಾಳಿಯಿಂದ ಬೇಸತ್ತ ಗ್ರಾಮಸ್ಥರು ಅದನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಗುರುವಾರ ಅರಣ್ಯ ಪ್ರದೇಶವನ್ನು ಸುತ್ತುವರಿದ ಗ್ರಾಮಸ್ಥರು ಹುಲಿಗಾಗಿ ಹುಡುಕಾಟ ನಡೆಸಿದ್ದರು. ದುರಾದೃಷ್ಟವಶಾತ್ ಹುಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಹುಲಿ ಪ್ರಾಣ ಬಿಟ್ಟಿತ್ತು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ರಾಜಮೋಹನ್ ಅವರು, ಗ್ರಾಮಸ್ಥರು ಈಟಿಗಳಿಂದ ತಿವಿದಿದ್ದರಿಂದ ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಜೊತೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಪಕ್ಕೆಲುಬು ಮುರಿದಿದ್ದವು. ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಹುಲಿ ಸಾವನ್ನಪ್ಪಿತ್ತು. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.