ರಾಂಚಿ: ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವೆ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಂಗ್ಲೆಂಡ್ 145 ರನ್‌ಗಳಿಗೆ ಆಲೌಟ್ ಆಗಿದ್ದು, ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾ (Team India) ಸ್ಪಿನ್ನರ್ಸ್ ಅಶ್ವಿನ್ (Ashwin), ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ತತ್ತರಿಸಿದ ಇಂಗ್ಲೆಂಡ್ ಅರ್ಧದಿನದಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಇನ್ನೂ 192 ರನ್‌ಗಳ ಗುರಿ ಪಡೆದಿರುವ ಭಾರತ 8 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 40 ರನ್ ಕಲೆಹಾಕಿದೆ. ಟೀಂ ಇಂಡಿಯಾ ಗೆಲುವಿಗೆ ಇನ್ನೂ 152 ರನ್‌ಗಳ ಅಗತ್ಯವಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 24 ರನ್, ಯಶಸ್ವಿ ಜೈಸ್ವಾಲ್ (Yashasvi Jaiswal) 16 ರನ್ ಗಳಿಸಿ ಅಜೇಯರಾಗುಳಿದಿದ್ದು ಸೋಮವಾರ (ಫೆ.26) ಕ್ರೀಸ್ ಆರಂಭಿಸಲಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿಯನ್ನೂ ಗೆಲ್ಲುವ ವಿಶ್ವಾದಲ್ಲಿ ಟೀಂ ಇಂಡಿಯಾ ಇದೆ.
Advertisement
Advertisement
3ನೇ ದಿನ 46 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿತ್ತು. ಆದ್ರೆ ಟೀಂ ಇಂಡಿಯಾ ಸ್ಪಿನ್ನರ್‌ಗಳ ದಾಳಿಗೆ ತುತ್ತಾಗಿ ತೀವ್ರ ಹಿನ್ನಡೆ ಅನುಭವಿಸಿತು. ಇಂಗ್ಲೆಂಡ್ ಪರ ಝಾಕ್ ಕ್ರಾವ್ಲಿ (Zak Crawley) 60 ರನ್ (91 ಎಸೆತ, 7 ಬೌಂಡರಿ), ಜಾನಿ ಬೈರ್ಸ್ಟೋವ್ 30 ರನ್ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ತರಗೆಲೆಗಳಂತೆ ಉದುರಿದರು, ಇದರಿಂದ ಇಂಗ್ಲೆಂಡ್ 145 ರನ್‌ಗಳಿಗೆ ಆಲೌಟ್ ಆಯಿತು.
Advertisement
Advertisement
ಆಂಗ್ಲರ ಈ ಉತ್ಸಾಹಕ್ಕೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಬ್ರೇಕ್ ಹಾಕಿದರು. ರವಿಚಂದ್ರನ್ ಅಶ್ವಿನ್ 15.5 ಓವರ್‌ಗಳಲ್ಲಿ 51 ರನ್ ಬಿಟುಕೊಟ್ಟ ಅಶ್ವಿನ್ 5 ವಿಕೆಟ್ ಕಿತ್ತರೆ, ಕುಲ್ದೀಪ್ ಯಾದವ್ 4 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮುಂಚಿದರು.
ಜುರೆಲ್, ಜೈಸ್ವಾಲ್ ಬ್ಯಾಟಿಂಗ್ ಬಲ:
4ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ, ಪಂದ್ಯದ ಮೂರನೇ ದಿನದಾಟದಲ್ಲಿ ದಿಟ್ಟ ಹೋರಾಟ ನಡೆಸಿತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಅವರ 90 ರನ್‌ಗಳ ಬಲದಿಂದ ಭಾರತ ತಂಡ ಚೇತರಿಸಿಕೊಂಡಿತು. ಇದರೊಂದಿಗೆ ಕುಲ್ದೀಪ್ ಯಾದವ್ 131 ಎಸೆತಗಳಲ್ಲಿ 28 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಭಾರತ 300 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್ ಕಲೆಹಾಕಿ, ಕೇವಲ 46 ರನ್‌ಗಳ ಹಿನ್ನಡೆ ಅನುಭವಿಸಿತ್ತು.
ಭಾರತ ತಂಡದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಬ್ಯಾಟಿಂಗ್‌ಗೆ ಬಂದಾಗ ತಂಡ 200ಕ್ಕೂ ಹೆಚ್ಚು ರನ್‌ಗಳ ಹಿನ್ನಡೆ ಅನುಭವಿಸುವ ಭೀತಿಯಲ್ಲಿತ್ತು. 177 ರನ್‌ಗಳಿಗೆ ಭಾರತ ತಂಡ ತನ್ನ 7ನೇ ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕುಲ್ದೀಪ್ ಯಾದವ್ ಜೊತೆಗೂಡಿ ಅಮೋಘ ಪ್ರದರ್ಶನ ನೀಡಿದ ಧ್ರುವ್ ಜುರೆಲ್, 8ನೇ ವಿಕೆಟ್‌ಗೆ 202 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಆಕಾಶ್ ದೀಪ್ ಜೊತೆಗೂಡಿಯೂ 40 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದರು. ಈನಡುವೆ ಜುರೆಲ್ ಶತಕ ವಂಚಿತರಾದರು.
ಶೋಯೆಬ್ ಬಶೀರ್ ಚೊಚ್ಚಲ 5 ವಿಕೆಟ್ ಸಾಧನೆ:
ಇಂಗ್ಲೆಂಡ್ ತಂಡದ ಪರ ಯುವ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಚೊಚ್ಚಲ 5 ವಿಕೆಟ್ ಸಾಧನೆಯೊಂದಿಗೆ ಮಿಂಚಿದರು. 20 ವರ್ಷದ ಯುವ ಬೌಲರ್ ಒಟ್ಟಾರೆ 44 ಓವರ್‌ಗಳನ್ನು ಎಸೆದು 119ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನ 2ನೇ ಪಂದ್ಯದಲ್ಲೇ 5 ವಿಕೆಟ್ ಸಾಧನೆಯೊಂದಿಗೆ ಗಮನ ಸೆಳೆದರು. ಇದರೊಂದಿಗೆ ಟಾಮ್ ಹಾರ್ಟ್ಲೀ 3 ವಿಕೆಟ್, ಜೇಮ್ಸ್ ಆಂಡರ್ಸನ್ 2 ವಿಕೆಟ್ ಕಿತ್ತರು. ಮೊದಲ ಇನಿಂಗ್ಸ್‌ನಲ್ಲಿ 353 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ 46 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿತ್ತು.