ಬೆಳಗಾವಿ: ಹಣಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಸಹಪಾಠಿಯನ್ನೇ ಅಪಹರಿಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಜಿಐಟಿ ಕಾಲೇಜಿನ 23 ವರ್ಷದ ವಿದ್ಯಾರ್ಥಿನಿ ಅರ್ಪಿತಾ ನಾಯಕ್ ಕಿಡ್ನಾಪ್ ಆಗಿದ್ದ ವಿದ್ಯಾರ್ಥಿನಿ. 17ನೇ ತಾರೀಖಿನಂದು ರಾತ್ರಿ ಅರ್ಪಿತಾ ಊಟಕ್ಕೆಂದು ಸ್ನೇಹಿತೆ ದಿವ್ಯಾ ಮಲಘಾಣ ಜೊತೆ ತೆರಳಿದ್ದರು. ಈ ವೇಳೆ ದಿವ್ಯಾ ಹಾಗೂ ಆಕೆಯ ಪ್ರಿಯತಮನಾದ ಗದಗ ಮೂಲದ ಕೇಧಾರಿ ಇಬ್ಬರೂ ಸೇರಿ ಅರ್ಪಿತಾರನ್ನ ಕಿಡ್ನ್ಯಾಪ್ ಮಾಡಿದ್ದರು.
Advertisement
ಎಳನೀರಲ್ಲಿ ನಿದ್ದೆ ಮಾತ್ರೆ ಹಾಕಿ ಕುಡಿಸಿ, ಕ್ಲೋರೋಫಾರ್ಮ್ ಮೂಗಿಗೆ ಒತ್ತಿ ಅರ್ಪಿತಾ ಪ್ರಜ್ಞೆ ತಪ್ಪುವಂತೆ ಮಾಡಿ ಅಪಹರಿಸಿದ್ದರು. ನಂತರ ಟಾಟಾ ಇಂಡಿಕಾ ಕಾರಿನಲ್ಲಿ ಅರ್ಪಿತಾರನ್ನು ಕರೆದುಕೊಂಡು ಹೋಗಿ ಗದಗದಲ್ಲಿ ಆಕೆಯನ್ನು ಬಚ್ಚಿಟ್ಟಿದ್ದರು. ಎಚ್ಚರವಾದಾಗ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಲಾಗಿದೆ ಅಂತ ಅರ್ಪಿತಾ ಹೇಳಿದ್ದರು. ಬಳಿಕ ಅರ್ಪಿತಾ ಮನೆಯವರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
Advertisement
ಐವರು ಪೊಲೀಸರ ವಿಶೇಷ ತಂಡದಿಂದ ಯುವತಿಯ ಪತ್ತೆ ಕಾರ್ಯ ನಡೆದಿತ್ತು. ಇದೀಗ ಗದಗದಲ್ಲಿ ಯುವತಿ ಪತ್ತೆಯಾಗಿದ್ದು, ಆಕೆಯನ್ನು ರಕ್ಷಿಸಿ ಪೊಲೀಸರು ಬೆಳಗಾವಿಗೆ ಕರೆತರುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಿವ್ಯಾ, ಕೇಧಾರಿ, ಕಾರು ಚಾಲಕ ಸುಮೀತ ಗಂಗಪ್ಪ ಅಲಿಯಾಸ್ ಬಬ್ಲುವನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 5 ಕೋಟಿ ರೂ. ಹಣ ವಸೂಲಿ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೆ ಬಳಸಿದ ಇಂಡಿಕಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.