ನಡೆದಾಡುವ ಅರಣ್ಯ ವಿಶ್ವಕೋಶ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ

Public TV
2 Min Read
Tulasi Gowda 1

ಬೆಂಗಳೂರು: ಕಳೆದ ವರ್ಷ ಕರ್ನಾಟಕ ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. ಈ ಬಾರಿ ಪರಿಸರ ಸಂರಕ್ಷಣೆ ಪಣತೊಟ್ಟ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ತುಳಸಿ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಈ ಬಾರಿ ರಾಜ್ಯದ ಇಬ್ಬರಿಗೆ ಪದ್ಮ ಗೌರವ ಸಿಕ್ಕಿದೆ. ಸಾಮಾಜಿಕ ಸೇವೆಯಲ್ಲಿ ತುಳಸಿ ಗೌಡ ಮತ್ತು ದಕ್ಷಿಣ ಕನ್ನಡದ ಕೊಣಾಜೆ ವಿಶ್ವವಿದ್ಯಾಲಯ ಸಮೀಪ ಇರುವ ಹರೇಕಳದಲ್ಲಿ ಶಾಲೆ ತೆರೆದ ಹಾಜಬ್ಬ ಅವರಿಗೆ ಈ ಶ್ರೇಷ್ಠ ಗೌರವ ಒಲಿದು ಬಂದಿದೆ.  ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

Tulasi Gowda 3

ಯಾರು ಈ ತುಳಸಿ ಗೌಡ?
ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ 82 ವರ್ಷದ ವೃದ್ಧೆ ತುಳಸಿಗೌಡ ಅವರು ಸದ್ದಿಲ್ಲದೇ ಪ್ರಕೃತಿ ರಕ್ಷಣೆ ನಿಂತಿದ್ದಾರೆ.  72 ವರ್ಷದ ತುಳಸಿ ಗೌಡ ಅವರು ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಗಿಡಗಳನ್ನು ನೆಟ್ಟು ಬೋಳು ಬಿದ್ದ ಗುಡ್ಡಗಳಿಗೆ ಹಸಿರ ಹೊದಿಕೆ ಹೊದಿಸಿದ್ದಾರೆ. ಬಾಲ್ಯದಲ್ಲೇ ಅಪ್ಪ, ಮದುವೆಯಾದ ಬಳಿಕ ಗಂಡನ ಕಳೆದುಕೊಂಡ್ರೂ ಕಾಡಿನ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡ್ರು. ಈ ವೇಳೆ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ಕೆ ಸೇರಿಕೊಂಡರು.

KWR PUBLIC HERO COLLAGE

 

72 ವರ್ಷವಾದರೂ ಈಗಲೂ ಪರಿಸರ ಪ್ರೇಮವನ್ನು ತೋರುತ್ತಿರುವ ತುಳಸಿ ಗೌಡ ‘ಅರಣ್ಯದ ವಿಶ್ವಕೋಶ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ.

ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದು, ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದಾರೆ. ಮರಗಳ ವಿಜ್ಞಾನಿ ಎಂದೇ ಉತ್ತರ ಕನ್ನಡದಲ್ಲಿ ಇವರನ್ನು ಕರೆಯಲಾಗುತ್ತದೆ.

Tulasi Gowda 4

ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ವಯಸ್ಸಾದರೂ ಈಗಲೂ ಲಕ್ಷಾಂತರ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೀತಿಯನ್ನು ತೋರುತ್ತಿದ್ದಾರೆ.

ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೋಷಿಸ ತೊಡಗಿದರು.  ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ್ರು. 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು `ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಇವರ ಶ್ರಮ ಹಾಗೂ ಉತ್ಸಾಹವನ್ನು ಪರಿಗಣಿಸಿ ಅಂದಿನ ಅರಣ್ಯಾಧಿಕಾರಿ ಅ.ನಾ.ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯವಲಯವನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ಹೀಗೆ ಈಕೆಯ ಜೀವಮಾನದಲ್ಲಿ ಲಕ್ಷಗಟ್ಟಲೇ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಇವರ ಸಾಧನೆ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

2018ರ ಜೂನ್ ತಿಂಗಳಲ್ಲಿ ತುಳಸಿ ಗೌಡ ಅವರು ‘ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *