ಬೆಂಗಳೂರು: ಇಂಧನ ಇಲಾಖೆಯ (Energy Department) ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ನೌಕರ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿರುವ ಇಂಧನ ಇಲಾಖೆ ಕಟ್ಟಡದಲ್ಲಿ ನಡೆದಿದೆ.
48 ವರ್ಷದ ವಜ್ರಕುಮಾರ್ ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರೋ ನೌಕರ. ಗುರುವಾರ ಸಂಜೆ 6:30ರ ಸುಮಾರಿಗೆ 6ನೇ ಫ್ಲೋರ್ನಿಂದ ಬಿದ್ದು ವಜ್ರಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವಜ್ರಕುಮಾರ್ ಕಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ (High Ground Police Station) ಪ್ರಕರಣ ದಾಖಲಾಗಿದೆ. ಮೃತ ವಜ್ರಕುಮಾರ್ ಆತ್ಮಹತ್ಯೆಗೆ ಹಲವು ಕಾರಣಗಳು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಜ್ರಕುಮಾರ್ಗೆ ಮಕ್ಕಳಿರಲಿಲ್ಲ, ಇತ್ತೀಚಿಗೆ ಡಿವೋರ್ಸ್ ಕೂಡ ಆಗಿತ್ತು. ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು ಹಣ ಬಂದಿರಲಿಲ್ಲ ಅನ್ನೋ ಕಾರಣಕ್ಕೆ ಬೆಸತ್ತಿದ್ದರು. ಆತ್ಮಹತ್ಯೆಗೆ ಇದೂ ಒಂದು ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪೂರ್ಣ ತನಿಖೆ ಬಳಿಕ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

