ವಾಷಿಂಗ್ಟನ್: ಭಾರತದ ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಇಂಟರ್ನೆಟ್(Internet) ಸಂಪರ್ಕದ ಕೊರತೆಯನ್ನು ನೀಗಿಸಲು ತಮ್ಮ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ಸ್ಟಾರ್‌ಲಿಂಕ್ (Starlink) ನೆರವಾಗಲಿದೆ ಎಂದು ಟೆಕ್ ಉದ್ಯಮಿ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.
ಭಾರತದಲ್ಲಿ(India) ಇನ್ನೂ 11,000ಕ್ಕೂ ಹೆಚ್ಚು ಹಳ್ಳಿಗಳಿಗೆ 4G ನೆಟ್‌ವರ್ಕ್ ತಲುಪಿಲ್ಲ ಎಂಬ ವರದಿಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಮಸ್ಕ್, ಭಾರತದ ಅತ್ಯಂತ ಹಿಂದುಳಿದ, ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಸ್ಟಾರ್‌ಲಿಂಕ್ ಉಪಯುಕ್ತವಾಗಲಿದೆ ಎಂದು ತಿಳಿಸಿದ್ದಾರೆ.
2026ರ ಮಾರ್ಚ್ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 109.3 ಕೋಟಿ ಇಂಟರ್ನೆಟ್ ಬಳಕೆದಾರರಿದ್ದು, ಈ ಪೈಕಿ ಗ್ರಾಮೀಣ ಭಾಗದಲ್ಲಿ 44.08 ಕೋಟಿ ಮಂದಿ ಇದ್ದಾರೆ. ನಗರ ಪ್ರದೇಶಗಳಲ್ಲಿ ಪ್ರತಿ 100 ಜನರಿಗೆ ಸರಾಸರಿ 126.80 ಇಂಟರ್ನೆಟ್ ಸಂಪರ್ಕಗಳಿದ್ದರೆ, ಗ್ರಾಮೀಣ ಭಾಗದಲ್ಲಿ ಇದು ಕೇವಲ 48.31 ಆಗಿದೆ.
Starlink would help the least served in India, especially in rural areas https://t.co/ffCvpL61WQ
— Elon Musk (@elonmusk) August 21, 2026
‘ಭಾರತ್‌ನೆಟ್’ ಯೋಜನೆಯಡಿ 8.5 ಲಕ್ಷ ಕಿ.ಮೀ.ಗೂ ಹೆಚ್ಚು ಆಪ್ಟಿಕಲ್ ಫೈಬರ್ ಅಳವಡಿಸಿ, 2.21 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಸಜ್ಜುಗೊಳಿಸಲಾಗಿದ್ದರೂ, ಜೂನ್ 2026ರ ವೇಳೆಗೆ ಕೇವಲ 80,472 ಪಂಚಾಯಿತಿಗಳಲ್ಲಿ ಮಾತ್ರ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: ಭಾರತೀಯರ ಪ್ರತಿಭೆಯಿಂದ ಅಮೆರಿಕ ಬೆಳವಣಿಗೆ ಸಾಧಿಸಿದೆ: ಮಸ್ಕ್
ಉಪಗ್ರಹ ಸೇವೆಗಳಿಗೆ ಸ್ಪೆಕ್ಟ್ರಮ್ ಹಂಚಿಕೆ ಮಾಡುವ ನಿಯಮಾವಳಿಗಳನ್ನು ಭಾರತ ಸರ್ಕಾರ ರೂಪಿಸುತ್ತಿದ್ದು, ಭಾರತದಲ್ಲಿ ವಾಣಿಜ್ಯ ಸೇವೆ ಆರಂಭಿಸಲು ಸ್ಟಾರ್‌ಲಿಂಕ್ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ಇರಾನ್ ಸಂಘರ್ಷದ ವೇಳೆ ಸ್ಟಾರ್‌ಲಿಂಕ್ ಬಳಕೆ ಹಾಗೂ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರ ಅನುಮೋದನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಗಳನ್ನು ಸಂಸ್ಥೆ ತಳ್ಳಿಹಾಕಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸ್ಟಾರ್‌ಲಿಂಕ್ ಬಿಸಿನೆಸ್ ಆಪರೇಷನ್ಸ್ ಉಪಾಧ್ಯಕ್ಷೆ ಲಾರೆನ್ ಡ್ರೇಯರ್, ಆಧಾರರಹಿತ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಭಾರತ ಸರ್ಕಾರದೊಂದಿಗೆ ನಮ್ಮ ಮಾತುಕತೆ ಸಕ್ರಿಯ ಹಾಗೂ ಸಕಾರಾತ್ಮಕವಾಗಿ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

