ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಗರವಳ್ಳಿ ಗ್ರಾಮದ ಬಳಿ ಹೆಣ್ಣಾನೆಯೊಂದು ನಿತ್ರಾಣಗೊಂಡು ಕುಸಿದು ಬಿದ್ದಿದೆ.
ಕೂಗರವಳ್ಳಿತ ಗ್ರಾಮದ ಕೆರೆಯ ಬಳಿ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೂ ಆನೆ ಸ್ಥಳದಿಂದ ಮೇಲಕ್ಕೆ ಏಳಲೇ ಇಲ್ಲ. ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಆನೆ ನಿತ್ರಾಣಗೊಂಡು ಬಿದ್ದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇಂದು ಬೆಳಗ್ಗೆಯೇ ಗ್ರಾಮಸ್ಥರು ಈ ವಿಚಾರವನ್ನು ಅರಣ್ಯ ಇಲಾಖೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದಾರೆ. ಆನೆ ಕೆಲವು ದಿನಗಳ ಹಿಂದೆ ಮರಿಯೊಂದಕ್ಕೆ ಜನ್ಮ ನೀಡಿದ್ದು, ನೀರು ಕುಡಿಯಲು ಬಂದಾಗ ನಿರ್ಜಲೀಕರಣದಿಂದಾಗಿ ಬಿದ್ದಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಆನೆ ಬಿದ್ದ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕಾಗಮಿಸಿ, ಆನೆಯನ್ನು ಊಳಿಸಿಕೊಡಿ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಕೆರೆಯ ಏರಿಯ ಮೇಲೆ ಆನೆಯೊಂದು ಗಾಯಗೊಂಡಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.