ಮಡಿಕೇರಿ: ಆಹಾರ ಅರಸಿ ಬಂದ ಕಾಡಾನೆ ಆಯ ತಪ್ಪಿ ಕಾಫಿ ತೋಟದಲ್ಲಿ ಬಿದ್ದಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಕಾರ್ಯ ಮುಂದುವರಿಸಿದ್ದಾರೆ.
ವಿರಾಜಪೇಟೆ ತಾಲೂಕಿನ ವಾಲ್ನೂರು ಗ್ರಾಮದ ತ್ಯಾಗತ್ತೂರು ರವಿ ಪೊನ್ನಪ್ಪ ಅವರ ಕಾಫಿ ತೋಟದಲ್ಲಿ ಕಾಡಾನೆ ನಿಯಂತ್ರಣ ಕಳೆದುಕೊಂಡು ಬಿದ್ದಿದೆ. ಇದನ್ನು ಕಂಡ ಕಾಫಿ ತೋಟದ ಮಾಲೀಕ ಪೊನ್ನಪ್ಪ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Advertisement
ಆರ್‍ಎಫ್‍ಒ ಅನನ್ಯ ಕುಮಾರ್, ವೈದ್ಯಾಧಿಕಾರಿ ಮುಜೀಬ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿಕಿತ್ಸೆ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಾಳೆಹಣ್ಣು, ನೀರು, ಭತ್ತದ ಹುಲ್ಲು ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಿದರೂ ಆನೆ ಚೇತರಿಸಿಕೊಳ್ಳುತ್ತಿಲ್ಲ. ಹೀಗಾಗಿ ಗ್ಲುಕೋಸ್ ನೀಡಿ ಚಿಕಿತ್ಸೆ ಮುಂದುವರಿಸಿದ್ದಾರೆ. ನಿಯಂತ್ರಣ ಕಳೆದುಕೊಂಡು ಬಿದ್ದಿರುವ ಕಾಡಾನೆಯನ್ನು ಮೇಲೆತ್ತಲು ದುಬಾರೆ ಆನೆ ಶಿಬಿರದಿಂದ ನಾಲ್ಕು ಆನೆಗಳನ್ನು ಕರೆ ತರಲಾಗಿದ್ದು, ಮೇಲೆತ್ತಲು ಪ್ರಯತ್ನಿಸಿದರೂ ಆನೆಗೆ ನಿಲ್ಲಲು ಸಾಧ್ಯವಾಗದೆ ಒದ್ದಾಡುತ್ತಿದೆ.
Advertisement
Advertisement
ಸಮೀಪದ ದುಬಾರೆ ಅರಣ್ಯ ಪ್ರದೇಶದಿಂದ ಕಾವೇರಿ ನದಿ ದಾಟಿ ಕಾಫಿ ತೋಟಕ್ಕೆ ಬಂದಿದ್ದು, ಕಳೆದ ಮೂರು ದಿನಗಳ ಹಿಂದೆಯೇ ಆನೆ ನಿಯಂತ್ರಣ ಕಳೆದುಕೊಂಡು ಕಾಫಿ ತೋಟದಲ್ಲಿ ಬಿದ್ದಿದೆ. ನೂರು ಮೀಟರ್ ಉದ್ದಕ್ಕೂ ಬಿದ್ದು ನರಳಾಡಿದೆ. ಈ ಕುರಿತು ವೈದ್ಯಾಧಿಕಾರಿ ಡಾ.ಮುಜೀಬ್ ಮಾತನಾಡಿ, ಅಂದಾಜು 35 ವರ್ಷದ ಹೆಣ್ಣಾನೆಯೊಂದು ಅರಣ್ಯದಿಂದ ನದಿ ದಾಟಿ ಬಂದಿದೆ. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಕಾಫಿ ತೋಟದಲ್ಲಿ ನಿಯಂತ್ರಣ ಕಳೆದುಕೊಂಡು ಬಿದ್ದಿದೆ. ಚಿಕಿತ್ಸೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.