ಚಾಮರಾಜನಗರ: ಕಳೆದ 3 ದಿನಗಳಿಂದ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕೊನೆಗೂ ಬನ್ನಿತಾಳಪುರ ಸಮೀಪ ಸೆರೆ ಹಿಡಿಯಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ಇಬ್ಬರು ರೈತರನ್ನು ಗಾಯಗೊಳಿಸಿದ್ದ ಈ ಆನೆ ಮೂರು ಜಾನುವಾರುಗಳನ್ನು ಕೊಂದಿತ್ತು. ತಮಿಳುನಾಡಿನ ಮಧುಮಲೈ ಕಾಡಿನಿಂದ ಓಡಿ ಬಂದಿದ್ದ ಪುಂಡಾನೆಯನ್ನು ಸಾಕಾನೆಗಳಾದ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, ಗಣೇಶ ಸಹಾಯದೊಂದಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ.
Advertisement
Advertisement
ತಮಿಳುನಾಡಿನಲ್ಲಿ 8 ಜನರನ್ನು ಕೊಂದಿತ್ತು ಎನ್ನಲಾದ ಪುಂಡಾನೆಯನ್ನು ಸೆರೆ ಹಿಡಿದ ಪರಿಣಾಮ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಸಾಕಷ್ಟು ತೊಂದರೆ ನೀಡುತ್ತಿದ್ದ ಕಾರಣ ಆನೆ ಚಲನವಲನ ಮೇಲೆ ನಿಗಾ ಹಿಡಲು ಅರಣ್ಯಾಧಿಕಾರಿಗಳು ಇದನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಮಧುಮಲೈ ಅರಣ್ಯಕ್ಕೆ ಬಿಟ್ಟಿದ್ದರು. ಆದರೆ ಅಲ್ಲಿಂದ ಬಂಡೀಪುರ ಅರಣ್ಯಕ್ಕೆ ಬಂದಿದ್ದ ಆನೆ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಸದ್ಯ ಸೆರೆ ಹಿಡಿಯಲಾಗಿರುವ ಪುಂಡಾನೆಯನ್ನು ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಶಿಬಿರಕ್ಕೆ ರವಾನಿಸಲಾಗಿದೆ.