-ಫಸಲಿಗೆ ಬಂದಿದ್ದ ಭತ್ತದ ಬೆಳೆ ನಾಶಪಡಿಸಿದ ಗಜಪಡೆ
ಹಾಸನ: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ (Elephant) ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಸಕಲೇಶಪುರ ತಾಲ್ಲೂಕಿನ ಬನವಾಸೆ ಗ್ರಾಮದ ಆಕಾಶವಾಣಿ ಟವರ್ ಬಳಿ ನಡೆದಿದೆ.
ಕಾಡಾನೆಗೆ ಅಂದಾಜು 25 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಆನೆ ಆಹಾರ ಅರಸಿ ಬನವಾಸೆ ಗ್ರಾಮದ ಆಕಾಶವಾಣಿ ಟವರ್ ಬಳಿ ಬಂದಿದೆ. ಈ ವೇಳೆ ಅಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿ ಆನೆಗೆ ತಾಕಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-ಫಸಲಿಗೆ ಬಂದಿದ್ದ ಭತ್ತದ ಬೆಳೆ ನಾಶ
ಫಸಲಿಗೆ ಬಂದಿದ್ದ ಭತ್ತದ ಬೆಳೆಯನ್ನು ಆನೆಗಳ ಹಿಂಡು ನಾಶಪಡಿಸಿದ ಘಟನೆ ಸಕಲೇಶಪುರದ ಮಲಗಳ್ಳಿ ಗ್ರಾಮದಲ್ಲಿ ನಡೆದಿದೆ. ಮುಂಜಾನೆ ಭತ್ತದ ಗದ್ದೆಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಭತ್ತದ ಗದ್ದೆಗಳನ್ನು ಸಂಪೂರ್ಣ ತುಳಿದು, ತಿಂದು ನಾಶ ಮಾಡಿವೆ. ಗ್ರಾಮದ ಹೂವಣ್ಣ, ರುದ್ರಯ್ಯ, ಚಿನ್ನಪ್ಪ, ಹೇಮಂತ್ ಮತ್ತು ಉಮೇಶ್ ಎಂಬವರಿಗೆ ಸೇರಿದ ಭತ್ತದ ಗದ್ದೆಗಳು ಆನೆಗಳ ದಾಳಿಯಿಂದ ಹಾನಿಗೊಳಗಾಗಿವೆ.
ಸಾಲ ಮಾಡಿ ನಾಟಿ ಮಾಡಿದ್ದ ರೈತರು, ಭತ್ತದ ಬೆಳೆ ನಾಶದಿಂದ ಕಣ್ಣೀರಿಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.