– ಕೈಗೆಟುಕುವಷ್ಟು ಅಪಾಯ ಸ್ಥಿತಿಯಲ್ಲಿ ಕೇಬಲ್
ಬೆಂಗಳೂರು: ಹಂಪಿನಗರದ (Hampi Nagar) ರಸ್ತೆಯಲ್ಲಿ ವಿದ್ಯುತ್ ತಂತಿಯೊಂದು ನೇತಾಡುತ್ತಿದೆ. ಮಳೆ ಬಂದರೆ ಆಗಾಗ ಬೆಂಕಿ ಕಾಣಿಸಿಕೊಳ್ತಿದ್ದು, ಶಾರ್ಟ್ ಸರ್ಕ್ಯೂಟ್ ಆಗುವ ಆತಂಕವಿದೆ. ಎರಡ್ಮೂರು ದಿನಗಳಿಂದ ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟವರು ಇವರೆಗೂ ದುರಸ್ತಿ ಮಾಡಿಲ್ಲ.
ವಿಜಯನಗರ ವಿಧಾನಸಭಾ ಕ್ಷೇತ್ರದ ಹಂಪಿನಗರದ 11ನೇ ಮುಖ್ಯರಸ್ತೆಯಲ್ಲಿ ಈ ಬೆಸ್ಕಾಂ ವಿದ್ಯುತ್ ಕಂಬವಿದೆ. ಕಳೆದ ಎರಡ್ಮೂರು ದಿನಗಳಿಂದ ಈ ವಿದ್ಯುತ್ ತಂತಿ ನೆಲಕ್ಕೆ ತಾಗುವ ಸ್ಥಿತಿಯಲ್ಲಿ ನೇತಾಡುತ್ತಿದೆ. ಈ ಕಂಬದಿಂದ ಈ ಭಾಗದ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನ ನೀಡಲಾಗ್ತಿದೆ. ಈ ಕಂಬದ ಎದುರುಗಡೆಯೇ ಮಾಂಟೆಸ್ಸರಿ ಶಾಲೆಯಿದೆ. ಪುಟಾಣಿ ಮಕ್ಕಳು ಗೊತ್ತಿಲ್ಲದೇ ಕೈ ತಾಗಿಸಿದ್ರೆ ಅನಾಹುತ ಆಗೋ ಸಾಧ್ಯತೆಗಳೇ ಹೆಚ್ಚು. ಇದನ್ನೂ ಓದಿ: ಫೆಂಗಲ್ ಎಫೆಕ್ಟ್ – ರಾಜ್ಯದಲ್ಲಿ ಈ ವಾರವೂ ಮುಂದುವರಿಯಲಿದೆ ಮಳೆ
ಸಂಜೆ ಹೊತ್ತಲ್ಲಿ ಈ ಬೀದಿದೀಪ ಸ್ಟಾರ್ಟ್ ಆಗುತ್ತೆ. ಮಳೆ ಬಂದಾಗ ಈ ಡೇಂಜರಸ್ ವೈಯರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತೆ. ಹೀಗಾಗಿ, ಜನ ಈ ಕಂಬದ ಸಮೀಪ ಓಡಾಡೋದಕ್ಕೆ ಭಯ ಪಡುತ್ತಾರೆ. ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಮಕ್ಕಳಿಗೆ ಏನಾದರು ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಅಂತಾ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಬಹುತೇಕ ಭಾಗಗಳಲ್ಲಿ ಡೇಂಜರಸ್ ವಿದ್ಯುತ್ ಕಂಬಗಳಿವೆ. ಕೆಲವೊಂದನ್ನು ಬೆಸ್ಕಾಂ ನಿರ್ವಹಣೆ ಮಾಡ್ತಿದ್ದರೆ, ಕೆಲವನ್ನು ಪಾಲಿಕೆ ನಿರ್ವಹಣೆ ಮಾಡ್ತಿದೆ. ಸುರಕ್ಷತೆಯ ವಿಚಾರದಲ್ಲಿ ಬಿಬಿಎಂಪಿ, ಬೆಸ್ಕಾಂ ಅಲರ್ಟ್ ಆಗಬೇಕಿದೆ. ಅಪಾಯಕ್ಕೆ ಆಹ್ವಾನ ನೀಡುವ ಡೇಂಜರಸ್ ಕೇಬಲ್, ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಬೇಕಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ