ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಕ್ಷೇತ್ರದಲ್ಲಿ ಅಕ್ರಮವಾಗಿ ಹಣ, ಮದ್ಯ ಹಂಚಿಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಸಾರಕ್ಕಿ ವಾರ್ಡ್, ಜೆ ಪಿ ನಗರ ಮೊದಲ ಹಂತದ ಬಡಾವಣೆಗಳಲ್ಲಿನ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಮದ್ಯ ಹಾಗೂ ಹಣ ಸಂಗ್ರಹಿಸಿಟ್ಟುರುವ ಕುರಿತು ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಬಿಜೆಪಿ ಕಾರ್ಯಕರ್ತ ನರಸಿಂಹರಾಜ್ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಮನೆಯಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿ ಪರಿಶೀಲನೆ ನಡೆಸಿದ್ದಾರೆ. ದಾಳಿ ಮಾಡಿದ ಸಂದರ್ಭದಲ್ಲಿ ಮನೆಯಲ್ಲಿ ಯಾವುದೇ ವಸ್ತುಗಳು ದೊರೆತಿಲ್ಲ ಎನ್ನಲಾಗಿದೆ. ಆದರೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದರಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಅಂತ ಹರಿಹಾಯ್ದಿದ್ದಾರೆ.
ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅವರು ಸರ್ಕಾರವನ್ನು ಮುಂದಿಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಸರ್ಚ್ ವಾರೆಂಟ್ ಇಲ್ಲದೇ ಚುನಾವಣಾ ಆಯೋಗ ಹಾಗೂ ಪೊಲೀಸರು ಈ ರೀತಿ ಪರಿಶೀಲನೆ ಮಾಡುವುದು ಎಷ್ಟು ಸರಿ ಅಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯನಗರ ವಿಧಾನಸಭೆ ಚುನಾವಣೆ ನಾಳೆ ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇಂದು ಅಭ್ಯರ್ಥಿಗಳಿಂದ ಮನೆಮನೆ ಪ್ರಚಾರ ನಡೆಯಲಿದೆ.