– ನಿರ್ಮಾಪಕರಿಗೆ ಚುನಾವಣಾ ಆಯೋಗ ಆದೇಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ಚುನಾವಣಾ ಆಯೋಗ ಬುಧವಾರ ತಡೆಯಾಜ್ಞೆ ಹೇರಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಆದೇಶಿಸಿದೆ.
ಜೀವನಾಧಾರಿತ ಸಿನಿಮಾಗಳು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರ ಜೀವನಾಧಾರಿತ ಸಿನಿಮಾ, ಸಿನಿಮಾಟೋಗ್ರಾಫ್ ಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ.
Advertisement
Advertisement
ಈ ಹಿಂದೆ ಆಗಿದ್ದೇನು?:
ಪಿಎಂ ನರೇಂದ್ರ ಮೋದಿ ಸಿನಿಮಾವನ್ನು ಮೊದಲ ಹಂತದ ಮತದಾನ ನಡೆಯಲಿರುವ ಏಪ್ರಿಲ್ 11ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಪ್ರಕಟಿಸಿದ್ದರು. ಈ ಸಿನಿಮಾ ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಅಮಾನ್ ಪನ್ವರ್ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದರು.
Advertisement
ಈ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ಸಿನಿಮಾ ಬಿಡುಗಡೆಗೆ ತಡೆ ನೀಡಲು ಮಂಗಳವಾರ ನಿರಾಕರಿಸಿತ್ತು. ಇದೊಂದು ವಿವಾದದ ವಿಷಯವೇ ಅಲ್ಲ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠವು, ಕೇವಲ ಎರಡು ಪ್ರೋಮೊ ನೋಡಿ ಇಡೀ ಚಿತ್ರದ ಬಗ್ಗೆ ಅಭಿಪ್ರಾಯಕ್ಕೆ ಬರಲಾಗದು. ಅರ್ಜಿದಾರರು ಬೇಕಿದ್ದರೆ ಚುನಾವಣಾ ಆಯೋಗದ ಮೊರೆ ಹೋಗಬಹುದು ಎಂದು ತಿಳಿಸಿದ್ದರು.
Advertisement
ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದು, `ಮೇರಿ ಕೋಮ್’, ಸರಬ್ಜಿತ್ ಸಿಂಗ್ ಜೀವನಾಧಾರಿತ ಸಿನಿಮಾಗಳನ್ನು ಯಶಸ್ವಿಯಾಗಿ ನಿರ್ದೇಶನ ಮಾಡಿದ್ದ ಒಮಂಗ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೋದಿ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳೊಂದಿಗೆ ಗುಜರಾತ್ ಸಿಎಂ ಆದ ಬಳಿಕ ಮಾಡಿದ ಸಾಧನೆಗಳಿಂದ ಪ್ರಧಾನಿಯಾಗುವ ಅವಧಿಯ ಜೀವನವನ್ನು ಆಧಾರಿಸಿದೆ. ಸಿನಿಮಾದ ಪೋಸ್ಟರ್ ಒಂದನ್ನೇ 27 ಭಾಷೆಗಳಲ್ಲಿ ಚಿತ್ರತಂಡ ಬಿಡುಗಡೆ ಮಾಡಿತ್ತು.