ಚಿಕ್ಕಬಳ್ಳಾಪುರ: ಲೋಕಸಭಾ ಅಖಾಡದಲ್ಲಿರೋ ಈ ಇಬ್ಬರು ಘಟಾನುಘಟಿ ನಾಯಕರುಗಳಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಒಬ್ಬರು ಮಂತ್ರಿಯಾಗಿ ಹೆಸರು ಮಾಡಿದ್ರೆ ಮತ್ತೊಬ್ಬರು ಮುಖ್ಯಮಂತ್ರಿಗಳಾಗಿ ಹೆಸರು ಮಾಡಿದವರು. ಈ ಬಾರಿ ಗೆಲ್ಲಲೇ ಬೇಕು ಅಂತ ಹಠಕ್ಕೆ ಬಿದ್ದ ಇವರಿಬ್ಬರೂ ಇದೀಗ ದೇವಮೂಲೆಯ ಮೊರೆ ಹೋಗಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಭಾರಿ ತ್ರಿಕೋನ ಸ್ಪರ್ಧೆ ನಡುವೆಯೂ ಸುಲಭವಾಗಿ ಗೆಲುವು ಸಾಧಿಸಿದ್ದ ಮೊಯ್ಲಿ, ಈ ಬಾರಿ ಜಯಕ್ಕಾಗಿ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮೈತ್ರಿ ಕಾರ್ಯಕರ್ತರಲ್ಲಿ ಸಮನ್ವಯ ಮೂಡದ ಕಾರಣ ಮೊಯ್ಲಿ ಏನಾದ್ರು ಮಾಡಿ ಈ ಬಾರಿಯೂ ತಮ್ಮನ್ನು ಗೆಲ್ಲಿಸುವಂತೆ ದೇವರ ಮೊರೆ ಹೋಗಿದ್ದಾರೆ. ಹಾಗಾಗಿ ಬಾಗೇಪಲ್ಲಿ ತಾಲೂಕಿನ ಗೂಳೂರು, ಚಾಕವೇಲು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.
ತಮ್ಮ ಎದುರಾಳಿ ಅಭ್ಯರ್ಥಿ ದೇವಮೂಲೆಯಿಂದ ಪ್ರಚಾರ ಆರಂಭಿಸಿದ್ದೆ ತಡ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಸಹ, ತಮ್ಮ ಅಪಾರ ಬೆಂಬಲಿಗರ ಜೊತೆ ಬಾಗೇಪಲ್ಲಿಯ ಚಾಕವೇಲು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದಲೇ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಕ್ಷೇತ್ರದ ದೇವಮೂಲೆಯಿಂದ ಈ ಬಾರಿ ಚುನಾವಣಾ ಪ್ರಚಾರ ಮಾಡಿದ್ರೆ ಗೆಲ್ಲುತ್ತೀರಿ ಅಂತ ಪಂಡಿತರು ಹೇಳಿದ್ದರಿಂದ ಈ ಇಬ್ಬರು ನಾಯಕರು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಇಬ್ಬರು ದೇವಮೂಲೆಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ.
ಇಬ್ಬರು ಘಟಾನುಘಟಿ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಲೆಕ್ಕಚಾರ ತಪ್ಪಾಗಬಾರದೆಂಬ ಲೆಕ್ಕದಲ್ಲಿ ಹೋದ ಕಡೆಯೆಲ್ಲಾ ದೇವರ ಮೊರೆ ಹೋಗುತ್ತಿದ್ದಾರೆ.