ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣ ಹಾಗೂ ಮುಂಡರಗಿ ಶ್ರೀ ಅನ್ನದಾನೀಶ್ವರ ಮಠದಲ್ಲಿ ವಿಭಿನ್ನವಾಗಿ ರಂಜಾನ್ ಹಾಗೂ 889ನೇ ಬಸವ ಜಯಂತಿ ಆಚರಿಸಲಾಯಿತು.
ಗಜೇಂದ್ರಗಡ, ಸೂಡಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಹಾಗೂ ಮೌಲ್ವಿ ನೇತೃತ್ವದಲ್ಲಿ ʻಭಾವೈಕ್ಯತೆ ನಡಿಗೆ ಸಾಮರಸ್ಯದ ಕಡೆಗೆʼ ಎಂಬ ವಿಭಿನ್ನ ಹಾಗೂ ವಿಶೇಷವಾದ ಪಾದಯಾತ್ರೆ ಮಾಡಲಾಯಿತು. ಈ ವೇಳೆ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಮರಸ್ಯ ಬಿಂಬಿಸುವ ಪಾದಯಾತ್ರೆ ನಡೆಯಿತು. ಈ ಮೆರವಣಿಗೆಯಲ್ಲಿ ವಿಶ್ವ ಗುರು ಬಸವಣ್ಣ, ಪ್ರವಾದಿ ಮಹಮ್ಮದ್ ಪೈಗಂಬರ್‌ಗೆ ಜಯಘೋಷ ಕೂಗಿದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಬಸವಶ್ರೀ ಪುರಸ್ಕಾರ ಪ್ರದಾನ
Advertisement
Advertisement
ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಜಾತಿಗಿಂತ ನೀತಿ ಮೇಲು, ಮಾನವ ಜನ್ಮಕ್ಕೆ ಜಯವಾಗಲಿ, ದೇವನೊಬ್ಬ ನಾಮ ಹಲವು ಎಂಬ ಘೋಷವಾಕ್ಯದೊಂದಿಗೆ ಹಿಂದೂ-ಮುಸ್ಲಿಂ ನಾವೆಲ್ಲಾ ಒಂದು ಎಂಬ ಸಂದೇಶ ಸಾರಿದರು. ನಂತರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಈ ವೇಳೆ ವಿಜಯ ಮಹಾಂತೇಶ್ವರ ಶ್ರೀಗಳು, ಜಗತ್ತಿನಲ್ಲಿ ಶಾಂತಿ ಸಿಗಬೇಕು ಅಂದರೆ ಎಲ್ಲರೂ ಭಾವೈಕ್ಯತೆಯಿಂದ ನಡೆದುಕೊಳ್ಳಬೇಕು. ಇಂತಹ ಭಾವೈಕ್ಯ ಕಾರ್ಯಗಳಲ್ಲಿ ರಾಜಕೀಯ ವ್ಯಕ್ತಿಗಳು ಬೆರೆಯಬೇಕು. ಈಗ ರಾಜಕೀಯ ವ್ಯಕ್ತಿಗಳಲ್ಲಿ ಸಮಾಧಾನ ಶಾಂತಿ ಇಲ್ಲ. ಬರೀ ಪಾರ್ಟಿ, ಪಕ್ಷ ನೋಡ್ತಾರೆ. ಸಮಾಜ, ನಾಡಿನ ಜನತೆಯನ್ನು ನೋಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ದೇವರಿಗೆ ಜಾತಿಯ ಮಿತಿ ಇಲ್ಲ. ಜಾತಿ ಅಂದರೆ ವಿಷ. ಧರ್ಮ ಅಂದರೆ ಅಮೃತ. ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದನ್ನು ಎಲ್ಲರೂ ಬಿಡಬೇಕು ಎಂದು ಶ್ರೀಗಳು ಮನವಿ ಮಾಡಿದರು. ಇದನ್ನೂ ಓದಿ: ರಾಯಚೂರಿನಲ್ಲಿ ರಂಜಾನ್ ಸಂಭ್ರಮ ಜೋರು: ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ
Advertisement
ಮುಂಡರಗಿ ಪಟ್ಟಣದ ಶ್ರೀ ಅನ್ನದಾನೀಶ್ವರ ಮಠದಲ್ಲೂ ಪವಿತ್ರ ರಂಜಾನ್ ಹಬ್ಬ ಹಾಗೂ ವಿಶ್ವಗುರು ಬಸವಣ್ಣನವರ 889ನೇ ಜಯಂತಿಯನ್ನು ಒಟ್ಟಾಗಿ ಭಾವೈಕ್ಯತೆಯಿಂದ ಆಚರಿಸಲಾಯಿತು. ಎಲ್ಲೆಡೆ ಧರ್ಮ ಧಂಗಲ್ ನಡೆಯುವ ಸಂದರ್ಭದಲ್ಲಿ ಮುಂಡರಗಿ ಶ್ರೀ ಅನ್ನದಾನೀಶ್ವರ ಮಠದಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಬಸವ ಜಯಂತಿ ಹಾಗೂ ರಂಜಾನ್ ಆಚರಿಸಿದರು. ನಾಡೋಜ ಶ್ರೀ ಅಭಿನವ ಅನ್ನದಾನೀಶ್ವರ ಮಹಾಸ್ವಾಮೀಜಿ, ಬೈರನಹಟ್ಟಿ ದೊರೆಸ್ವಾಮಿ ಮಠದ ಶಿವಶಾಂತವೀರ ಶ್ರೀಗಳು ಹಾಗೂ ಮೌಲ್ವಿಗಳ ನೇತೃತ್ವದಲ್ಲಿ ಈ ಕೋಮುಸೌಹಾರ್ದತೆ ಕಾರ್ಯಕ್ರಮ ಜರುಗಿತು.
ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಹಿಂದೂ-ಮುಸ್ಲಿಂ ಸಮಾಜದ ಬಾಂಧವರು ಒಟ್ಟಾಗಿ ಬಸವಣ್ಣ ಹಾಗೂ ಮಹಮ್ಮದ್ ಪೈಗಂಬರ್ ಪ್ರಾರ್ಥನೆ, ಪೂಜೆ, ಜಪತಪ ಮಾಡಿ ಜಯಘೋಷ ಕೂಗಿದರು. ಈ ವೇಳೆ ಮುಸ್ಲಿಮರು ಹಾಗೂ ಬಸವಣ್ಣನ ಅಯಾಯಿಗಳನ್ನು ಒಟ್ಟಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ವೈ.ಎನ್.ಗೌಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ರಂಜಾನ್ ಮುನ್ನಾ ದಿನವೇ ಎರಡು ಗುಂಪುಗಳ ಮಧ್ಯೆ ಗಲಾಟೆ – ಇಂಟರ್ನೆಟ್ ಸ್ಥಗಿತ