– ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ
ಮಂಗಳೂರು: ಕರಾವಳಿಯಾದ್ಯಂತ ಇಂದು ಈದ್ ಉಲ್ ಫಿತ್ರ್ (Eid Ul- Fitr 2026) ಹಬ್ಬ ಆಚರಣೆ ನಡೆದಿದ್ದು, ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಸ್ವೀಕರ್ ಯು.ಟಿ.ಖಾದರ್ (U.T.Khader) ಎಲ್ಲರ ಜೊತೆಯಾಗಿ ಪ್ರಾರ್ಥನೆ ಮಾಡಿದರು. ಈದ್ಗಾ ಮಸೀದಿಯಲ್ಲಿ ಪ್ರಮುಖ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು. ಪ್ರಾರ್ಥನೆಯಲ್ಲಿ ಭಾಗಿಯಾದ ಸ್ವೀಕರ್ ಯು.ಟಿ.ಖಾದರ್ ರಂಜಾನ್ ಹಬ್ಬದ ಶುಭಾಶಯ ತಿಳಿಸಿದರು. ಇದನ್ನೂ ಓದಿ: ಜಾಗತಿಕ ತೈಲ, ಅನಿಲ ಬಿಕ್ಕಟ್ಟು; ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿಗೊಳಿಸಿದ ಸರ್ಕಾರ
ಪ್ರೀತಿ, ವಿಶ್ವಾಸ, ಸೋದರತೆ ಸಮಾಜ ಅಭಿವೃದ್ಧಿಯೇ ಈ ಹಬ್ಬದ ಸಂದೇಶ. ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತ ನಮ್ಮ ಉದ್ದೇಶ. ನಮ್ಮ ಹಬ್ಬವನ್ನು ಆಚರಣೆಯ ಜೊತೆಯಲ್ಲಿ ಇತರ ಧರ್ಮದವರ ಜೊತೆ ಬೇರೆಯುವುದೇ ಈ ಹಬ್ಬದ ವಿಶೇಷತೆ. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಅನ್ನೋದೆ ನಮ್ಮ ಪ್ರಾರ್ಥನೆ. ಎಲ್ಲೇ ಯುದ್ಧವಾದ್ರೂ ಭಾರತ ಮಾನಸಿಕ ನೋವು ವ್ಯಕ್ತಪಡಿಸುತ್ತದೆ ಎಂದರು.
ಕರಾವಳಿ ಭಾಗದಲ್ಲಿ ಇಂದು ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತದೆ. ಬೇರೆ ಕಡೆಗಳಲ್ಲಿ ನಾಳೆ ಆಚರಣೆ ನಡೆಯಲಿದೆ. ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಮರ್ಥ್ ಶಾಮನೂರು
ಉಡುಪಿ ನಗರ, ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಜ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಜ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿಯ ದೊಡ್ಡಣಗುಡ್ಡೆ ಮಸೀದಿಯಲ್ಲಿ ಖತೀಬರಾದ ಖಾಸಿಂ ಸಅದಿ ಅವರು ಸರ್ವ ಧರ್ಮೀಯರಿಗೆ ಈದ್ ಸಂದೇಶ ನೀಡಿದರು. ಪವಿತ್ರ ರಂಜಾನ್ ಮಾಸದಲ್ಲಿ ನಾವು ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಆ ದೈವಭಕ್ತಿಯನ್ನು ಉಳಿಸಿಕೊಳ್ಳುವಂತಾಗಲಿ. ಹಸಿದವರಿಗೆ ಉಣಬಡಿಸುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈ ಹಬ್ಬದ ಮುಖ್ಯ ಉದ್ದೇಶ. ‘ಫಿತ್ರ್ ಝಕಾತ್’ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ. ನೆರೆಹೊರೆಯವರೊಂದಿಗೆ, ಅನ್ಯಧರ್ಮೀಯ ಬಾಂಧವರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಹಬ್ಬದ ಹೆಸರಿನಲ್ಲಿ ಅನಾಚಾರ ಅಥವಾ ದುಂದುವೆಚ್ಚಗಳಿಗೆ ಅವಕಾಶ ನೀಡದೆ, ಶರೀಅತ್ ಚೌಕಟ್ಟಿನೊಳಗೆ ಸಂಭ್ರಮಿಸಬೇಕು. ರಂಜಾನ್ ನಮಗೆ ಕಲಿಸಿದ ತಾಳ್ಮೆ ಮತ್ತು ದೈವಭಕ್ತಿ ನಮ್ಮ ಮುಂದಿನ ಜೀವನದ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅಲ್ಲಾಹನು ಬರಕತ್ ನೀಡಲಿ. ಈದ್ ಹಬ್ಬದ ಪವಿತ್ರ ಸಂದೇಶವು ಜಾಗತಿಕ ಸಾಮರಸ್ಯ, ಪರಸ್ಪರ ಗೌರವ ಮತ್ತು ಎಲ್ಲಾ ಗಡಿಗಳನ್ನು ಮೀರಿದ ಶಾಶ್ವತ ಶಾಂತಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

