ಬೆಂಗಳೂರು: ಮುಸ್ಲಿಂ ಬಾಂಧವರ ಮತ್ತೊಂದು ಪ್ರಮುಖ ಹಬ್ಬವಾದ ಬಕ್ರೀದ್ ಆಚರಣೆಗೆ (ಜು.10) ಸಿದ್ಧತೆ ನಡೆದಿದೆ. ಹಬ್ಬ ಆಚರಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಈ ಬಾರಿ ಬಕ್ರೀದ್ ಹಬ್ಬದ ವೇಳೆ ಜಾನುವಾರುಗಳನ್ನು ಬಲಿ ನೀಡಲು ಅವಕಾಶ ಇರುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿಕೆ ನೀಡಿದ್ದರು. ಅದರಂತೆ ಪ್ರಾಣಿ ಬಲಿಗೆ ಹಲವು ನಿರ್ಬಂಧಗಳನ್ನು ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಇದನ್ನೂ ಓದಿ: ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನಕ್ಕೆ ಕೊಂಕು
ರಾಜ್ಯದಲ್ಲಿ ಜಾರಿಯಲ್ಲಿರುವ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಕರುಗಳನ್ನು ಬಲಿ ನೀಡುವಂತಿಲ್ಲ. ಬಲಿ ನೀಡುವುದಕ್ಕಾಗಿ ಅವುಗಳನ್ನು ಸಾಗಾಟ ಮಾಡುವಂತೆಯೂ ಇಲ್ಲ ಎಂದು ಸೂಚಿಸಿದೆ.
ನಿಯಮಗಳೇನು?
ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ 2020ರ ನಿಯಮಗಳು ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು (ಪ್ರಾಣಿ ಬಲಿದಾನ) ನೆರವೇರಿಸುವುದು. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಪಕ್ಷಾತೀತ ಸ್ವಾತಂತ್ರ್ಯ ನಡಿಗೆ: ಡಿ.ಕೆ. ಶಿವಕುಮಾರ್
ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿದೆ.
ಜಿಲ್ಲಾಡಳಿತ/ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಖುರ್ಬಾನಿಯನ್ನು ನೆರವೇರಿಸತಕ್ಕದ್ದು.
ಖುರ್ಬಾನಿ ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳುವುದು.
ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು.
ಪೊಲೀಸ್ ಇಲಾಖೆ, ಪಶು ಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಮತ್ತು ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಹಬ್ಬದ ಆಚರಣೆ ಕುರಿತು ರಾಜ್ಯ ಸರ್ಕಾರ/ ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸತಕ್ಕದ್ದು.