Bengaluru CityDistrictsKarnatakaLatestMain Post

75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಪಕ್ಷಾತೀತ ಸ್ವಾತಂತ್ರ್ಯ ನಡಿಗೆ: ಡಿ.ಕೆ. ಶಿವಕುಮಾರ್

Advertisements

ಬೆಂಗಳೂರು: ದೇಶದ 75ನೇ ಸ್ವಾತಂತ್ರ್ಯದಿನಾಚಾರಣೆ ಅಂಗವಾಗಿ ಆಗಸ್ಟ್ 15ರಂದು ಮಧ್ಯಾಹ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿವರೆಗೂ ರಾಷ್ಟ್ರಧ್ವಜ ಹಿಡಿದು `ಫ್ರೀಡಂ ಮಾರ್ಚ್’ (ಸ್ವಾತಂತ್ರ್ಯ ನಡಿಗೆ) ಎಂಬ ಪಕ್ಷಾತೀತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಸುಮಾರು 75 ಸಾವಿರದಿಂದ 1 ಲಕ್ಷದವರೆಗೂ ಜನ ಸೇರಲಿದ್ದಾರೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಜನರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದು, ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದರು.

ಇದೊಂದು ಪಕ್ಷಾತೀತ ಕಾರ್ಯಾಕ್ರಮವಾಗಿದ್ದು, ಇದರಲ್ಲಿ ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕ್ರೀಡಾಪಟುಗಳು, ಕಲಾವಿದರು ಸೇರಿದಂತೆ ಎಲ್ಲರೂ ಭಾಗವಹಿಸಬಹುದು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ರಾಜ್ಯದಲ್ಲಿ ಪಾದಯಾತ್ರೆ ಮೂಲಕ ಆಚರಿಸಲು ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಈ ನಡಿಗೆಯನ್ನು ಒಂದು ಜಿಲ್ಲೆಯ ಎಷ್ಟು ತಾಲೂಕುಗಳಲ್ಲಿ ಮಾಡಬೇಕು ಎಂಬುದನ್ನು ಆಯಾ ಜಿಲ್ಲಾ ಕಾಂಗ್ರೆಸ್ ನಾಯಕರ ಇಚ್ಛೆಗೆ ಬಿಟ್ಟಿದ್ದೇವೆ ಎಂದು ತಿಳಿಸಿದರು.

ಆ.1 ರಿಂದ ಆ.10 ರವರೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಬೇಕಾದರೂ ಈ ಪಾದಯಾತ್ರೆ ಮಾಡಬಹುದು. ಕೆಲವು ನಾಯಕರು ತಮ್ಮ ಕ್ಷೇತ್ರಗಳಲ್ಲೇ 75 ಕಿ.ಮೀ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದು, ಅದಕ್ಕೂ ಅನುಮತಿ ನೀಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ, ಈ ದೇಶಕ್ಕೆ ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದ್ದು ಕಾಂಗ್ರೆಸ್. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಇದ್ದರೆ ಅವರನ್ನು ಅಥವಾ ಅವರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಯಾ ತಾಲೂಕಿನ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿದೆ ಅಂದ್ರು.

ಪಕ್ಷದ ವೇದಿಕೆಯಲ್ಲಿ ಸಿದ್ದರಾಮೋತ್ಸವ: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಪಕ್ಷದ ಚೌಕಟ್ಟಿನಲ್ಲಿ ನಡೆಸಲು ಅವರ ಹಿತೈಷಿಗಳು ತೀರ್ಮಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಆಗಮಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ ಎಂದು ಹೇಳಿದರು.

ಪಕ್ಷ ಸಂಘಟನೆ ವಿಚಾರವಾಗಿ ಪದಾಧಿಕಾರಿಗಳ ಸಭೆ: ಇಂದು ಪಕ್ಷದ ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ್ದು, ಪಕ್ಷದ ಸಂಘಟನೆ ಜವಾಬ್ದಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದ್ದೇವೆ. ಮುಂದಿನ 10 ತಿಂಗಳು ಪ್ರತಿಯೊಬ್ಬರು ತಮಗೆ ವಹಿಸಿರುವ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ತಿಂಗಳಿಗೆ ಕನಿಷ್ಠ 20 ದಿನಗಳ ಕಾಲ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಪಾಸಿಟಿವ್‌ ಆಗಿ ಯೋಚಿಸೋಣ: ಕಾಳಿ ದೇವಿ ಕುರಿತ ವಿವಾದದ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

ಬೂತ್ ಮಟ್ಟದಿಂದ ಪಂಚಾಯ್ತಿವರೆಗೂ ಎಲ್ಲ ವಿಭಾಗಗಳಲ್ಲೂ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಕ್ಷದ ಸಂಘಟನೆ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು 50 ವರ್ಷದೊಳಗಿನವರೇ ಆಗಿರುವಂತೆ ನೋಡಿಕೊಳ್ಳಬೇಕು. ಐದು ವರ್ಷ ಅಥವಾ ಎರಡು ಮೂರು ಅವಧಿಗೆ ಅಧ್ಯಕ್ಷರಾಗಿದ್ದವರಿಗೆ ಬಡ್ತಿ ನೀಡಿ ಆ ಸ್ಥಾನವನ್ನು ಹೊಸಬರಿಗೆ ನೀಡಬೆಕು. ಪ್ರತಿ ಪಂಚಾಯ್ತಿಗೂ ಪ್ರಧಾನ ಕಾರ್ಯದರ್ಶಿಗಳು ಪ್ರವಾಸ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಎಡಿಜಿಪಿ ಅಮೃತ್ ಪೌಲ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಇದರಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ನಾವು ಆಗ್ರಹಿಸಿದ್ದೇವೆ. ಈವರೆಗೂ ಬಂಧಿತರಾಗಿರುವವರ ಹೇಳಿಕೆ, ಯಾರು ಯಾರನ್ನು ಬಿಡಿಸಿದ್ದಾರೆ, ಏನೆಲ್ಲಾ ಪ್ರಭಾವ ಬೀರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರು ಹವಾಲಾ ನಡೆಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ, ಬಿಜೆಪಿಯವರು ಮೊದಲು ಅವರ ಮುಖ್ಯಮಂತ್ರಿಗಳು, ಅವರ ದೊಡ್ಡ ನಾಯಕರ ಮುಖಕ್ಕೆ ಅಂಟಿರುವ ಮಸಿ ತೊಳೆದುಕೊಳ್ಳಲಿ ಎಂದು ತಿರುಗೇಟು ಕೊಟ್ಟರು. ಇದೇ ವೇಳೆ ಜಮೀರ್ ಅಹ್ಮದ್ ಅವರ ಮನೆ ಮೇಲಿನ ಎಸಿಬಿ ದಾಳಿ ಮಾದರಿಯಲ್ಲಿ ಅಭಯ್ ಪಾಟೀಲ್ ಅವರ ಮೇಲೂ ಎಸಿಬಿ ದೂರು ದಾಖಲಿಸಿದ್ದು, ಅವರ ಮನೆ ಮೇಲೆ ದಾಳಿ ಮಾಡಲು ಸ್ಪೀಕರ್ ಅವರ ಅನುಮತಿ ಕೋರಲಾಗಿದೆ ಎಂಬುದನ್ನು ಗಮನಕ್ಕೆ ತಂದಾಗ ಕೇಳಿದ, ನನ್ನ ಮನೆ ಮೇಲೆ ದಾಳಿ ಮಾಡುವಾಗ ಯಾರೂ ಸ್ಪೀಕರ್ ಬಳಿ ಅನುಮತಿ ಕೇಳಿರಲಿಲ್ಲ ಎಂದರು.

Live Tv

Leave a Reply

Your email address will not be published.

Back to top button