ರಾಯಚೂರು: ಫೆಂಗಲ್ ಚಂಡಮಾರುತದ (Fengal Cyclone) ಪರಿಣಾಮ ಬಿಸಿಲನಾಡು ರಾಯಚೂರು (Raichuru) ಜಿಲ್ಲೆಗೂ ತಟ್ಟಿದೆ. ಜಿಲ್ಲೆಯಲ್ಲಿ ಜೋರಾಗಿ ಮಳೆಯಾಗದಿದ್ದರೂ ಕೂಡ ಜಿಟಿಜಿಟಿ ಮಳೆ, ಶೀತಗಾಳಿ ರೈತರನ್ನು ಕಂಗಾಲಾಗಿಸಿದೆ. ಕಣ್ಣುಮುಂದಿದ್ದ ಭತ್ತದ ಉತ್ತಮ ಫಸಲು ಕಟಾವಿಗೆ ಮುನ್ನವೇ ಸಂಪೂರ್ಣ ನೆಲಕ್ಕಚ್ಚಿದೆ.
ಜಿಲ್ಲೆಯ ರಾಯಚೂರು, ಸಿರವಾರ, ಮಾನ್ವಿ, ದೇವದುರ್ಗ, ಲಿಂಗಸುಗೂರು ತಾಲೂಕಿನಲ್ಲಿ ಹೆಚ್ಚು ಬೆಳೆಹಾನಿಯಾಗಿದ್ದು ರೈತರ ನಿರಾಸೆಗೆ ಕಾರಣವಾಗಿದೆ. ಜಿಟಿಜಿಟಿ ಮಳೆ, ಶೀತಗಾಳಿಗೆ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕಚ್ಚಿದ್ದು, ರೈತರು ಕೋಟ್ಯಾಂತರ ರೂಪಾಯಿ ಹಾನಿಗೊಳಗಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಭತ್ತ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದ ರೈತರಿಗೆ ಫೆಂಗಲ್ ಚಂಡಮಾರುತ ಆಘಾತವನ್ನುಂಟು ಮಾಡಿದೆ.ಇದನ್ನೂ ಓದಿ: ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ರಾಯಚೂರಲ್ಲಿ ಪ್ರತಿಭಟನೆ
ನೆಲಕ್ಕಚ್ಚಿದ ಭತ್ತವನ್ನು ಕಟಾವು ಮಾಡುವುದು ರೈತರಿಗೆ ಸಾಹಸದ ಕೆಲಸವಾಗಿದ್ದು, ಕಟಾವು ಮಾಡುವ ಯಂತ್ರಗಳು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೆಲಕ್ಕಚ್ಚಿದ ಭತ್ತವನ್ನ ಕಟಾವು ಮಾಡಲು ಯಂತ್ರಗಳ ಮಾಲೀಕರು ದುಪ್ಪಟ್ಟು ಹಣ ಕೇಳುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈಗ ಬೆಳೆಗೆ ಖರ್ಚು ಮಾಡಿದ ಹಣವೇ ಮರಳಿ ಬಾರದ ಪರಸ್ಥಿತಿ ಉಂಟಾಗಿದ್ದು, ಕಟಾವಿಗೆ ಮತ್ತೇ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಎಕರೆಗೆ 30 ರಿಂದ 40 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ಭತ್ತದ ಬೆಳೆ ಈ ಬಾರಿ ಉತ್ತಮ ಫಸಲಿನೊಂದಿಗೆ ರೈತರಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಕಳೆದ ಎರಡು, ಮೂರು ದಿನಗಳಿಂದ ಬದಲಾದ ವಾತಾವರಣ ಬೆಳೆಯನ್ನ ನೆಲಕ್ಕಚ್ಚುವಂತೆ ಮಾಡಿದೆ. ನೆಲಕ್ಕೆ ಬಿದ್ದ ಭತ್ತವನ್ನ ಪುನಃ ಕಟ್ಟಿನಿಲ್ಲಿಸುವ ಸಾಹಸಕ್ಕೆ ಮುಂದಾಗಿರುವ ರೈತರು, ಇರುವ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಭತ್ತ ನೆಲಕ್ಕಚ್ಚಿದ್ದರಿಂದ ಕಟಾವು ಮಾಡುವ ಯಂತ್ರಕ್ಕೆ ದಿನಕ್ಕೆ 8 ರಿಂದ 10 ಸಾವಿರ ರೂ. ಹೆಚ್ಚು ಹಣ ಕಟ್ಟಬೇಕಾಗಿದೆ. ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇಲ್ಲದಿರುವುದರಿಂದ ಸರ್ಕಾರ ಕೂಡಲೇ ಸರ್ವೇ ಕಾರ್ಯ ಆರಂಭಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಹಾಸನ ಸಮಾವೇಶ ಪಕ್ಷದ ಸಮಾವೇಶ, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ: ಸುಧಾಕರ್