ಕೊಪ್ಪಳ: ಜೀವನದ ಯಾವುದೋ ಒಂದು ಸಮಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಕೈದಿಗಳ ಜೀವನದಲ್ಲಿ ಹೊಸ ಪುಟವನ್ನು ತೆರೆಯುವ ಕೆಲಸವನ್ನು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಾಡಲಾಗುತ್ತಿದೆ.
ಜಿಲ್ಲಾ ಕಾರಾಗೃಹದಲ್ಲಿ ಅಕ್ಷರ ಕಲಿಕೆಯ ವಿಶೇಷ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಕಾರಾಗೃಹದಲ್ಲಿರುವ ಅಕ್ಷರಸ್ಥ ಕೈದಿಗಳಿಂದಲೇ ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಲಾಗುತ್ತಿದೆ. ನಿತ್ಯ ಅನಕ್ಷರಸ್ಥ ಕೈದಿಗಳಿಗೆ 1 ಗಂಟೆ ಅಕ್ಷರಗಳ ಸಾಮಾನ್ಯ ಜ್ಞಾನ ಹೇಳಿಕೊಡಲಾಗುತ್ತಿದೆ.
Advertisement
Advertisement
ಜಿಲ್ಲಾ ಕಾರಾಗೃಹದಲ್ಲಿ ಸುಮಾರು 300 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಅದರಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರಿಗೆ ಅಕ್ಷರ ಜ್ಞಾನ ಇಲ್ಲ. ಹೀಗಾಗಿ ಅನಕ್ಷರಸ್ಥ ಕೈದಿಗಳಿಗೆ ಜೈಲಿನಲ್ಲಿರುವ ಅಕ್ಷರಸ್ಥ ಕೈದಿಗಳಿಂದ ಪಾಠ ಮಾಡಿಸಲಾಗುತ್ತಿದೆ. ಪ್ರತಿ 10 ಅನಕ್ಷರಸ್ಥರನ್ನು ಒಂದು ತಂಡ ಮಾಡಿ ನಿತ್ಯ 1 ಗಂಟೆ ಅವರಿಗೆ ಪಾಠ ಮಾಡಲಾಗುತ್ತಿದೆ.
Advertisement
ಕೈದಿಗಳಿಗೆ ಶಿಕ್ಷಣ ನೀಡುವ ಈ ಕಾರ್ಯಕ್ಕೆ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಕೂಡಾ ಸಾಥ್ ನೀಡಿದ್ದು, ಕೈದಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿದೆ. ವಿವಿಧ ಅಪರಾಧದಲ್ಲಿ ಭಾಗಿಯಾದ ಬಂದ ಕೈದಿಗಳು ಇಲ್ಲಿಂದ ಹೊರಗಡೆ ಹೋದಾಗ ಅಕ್ಷರ ಕಲಿತು ಹೋಗಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾರಾಗೃಹ ಅಧೀಕ್ಷಕರಾದ ಬಿ.ಎಮ್.ಕೊಟ್ರೇಶ್ ತಿಳಿಸಿದ್ದಾರೆ.
Advertisement
ಮೊದಲಿಗೆ ಅಕ್ಷರ ಜ್ಞಾನ ಹೊಂದಿರುವ ಕೈದಿಗಳಿಗೆ ಕೆಲ ಮಾರ್ಗದರ್ಶನಗಳನ್ನು ನೀಡಿ ಆ ಬಳಿಕ ಇತರೇ ಕೈದಿಗಳಿಗೆ ಕಲಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಈ ಕಾರ್ಯಕ್ರಮ ಮೊದಲ ಭಾಗವಾಗಿ 6 ತಿಂಗಳ ಕಾಲ ನಡೆಯಲಿದೆ. ಇದು ಕೈದಿಗಳ ಜೀವನಕ್ಕೆ ನೆರವಾಗಲಿ. ಅಕ್ಷರ ಕಲಿತ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಹೊಸ ದಾರಿ ರೂಪಿಸಿಕೊಳ್ಳಿ ಎಂಬುವುದು ನಮ್ಮ ಗುರಿಯಾಗಿದೆ ಎಂದರು. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.