Connect with us

Cricket

ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

Published

on

ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಐತಿಹಾಸಿಕ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಮದುಮಗಳಂತೆ ಸಿಂಗಾರಗೊಂಡಿದೆ.

ಸೌರವ್ ಗಂಗೂಲಿ ಅವರು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲು ಅನುಮತಿ ನೀಡಿದ್ದಾರೆ. ನವೆಂಬರ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳೆರಡು ಮೊದಲ ಬಾರಿಗೆ ಪಿಂಕ್ ಬಾಲ್‍ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧವಾಗಿವೆ.

ಈ ಐತಿಹಾಸಿಕ ಪಂದ್ಯಕ್ಕೆ ಮೈದಾನವನ್ನು ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಸಂಪೂರ್ಣ ಸಿದ್ಧಗೊಳಿಸಿದ್ದು, ಬಣ್ಣ ಬಣ್ಣದ ಲೈಟುಗಳಿಂದ ಅಲಂಕಾರ ಮಾಡಲಾಗಿದೆ. ಪಿಂಕ್ ಬಾಲ್ ಪಂದ್ಯಕ್ಕೆ ಮದುಮಗಳಂತೆ ಸಿಂಗಾರಗೊಂಡಿರುವ ಈಡನ್ ಗಾರ್ಡನ್ಸ್ ಮೈದಾನದ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ ಪಿಂಕ್ ಬಾಲ್ ಪಂದ್ಯಕ್ಕೆ ನಾವು ಸಿದ್ಧ ಎಂದು ಬರೆದುಕೊಂಡಿದೆ.

ಕೋಲ್ಕತಾದಲ್ಲಿ ನಡೆಯುವ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಸಿದ್ಧವಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಹಗಲು ಮತ್ತು ರಾತ್ರಿ ಟೆಸ್ಟ್ ಪಂದ್ಯವನ್ನು ನೋಡಲು ಮುಂಗಡವಾಗಿಯೇ ಟೆಕೆಟ್ ಬುಕ್ ಮಾಡಿದ್ದಾರೆ. ಈ ಪಂದ್ಯದ ನಾಲ್ಕು ದಿನದ ಟೆಕೆಟ್ ಆಗಾಲೇ ಸೋಲ್ಡ್ ಔಟ್ ಆಗಿವೆ ಎಂದು ಬಿಸಿಸಿಐ ಅಧಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಶುಕ್ರವಾರ ನಡೆಯುವ ಪಂದ್ಯವನ್ನು ಟಾಸ್‍ಗೂ ಮುನ್ನ ಭಾರತೀಯ ಸೇನೆಯ ಪ್ಯಾರಾಟ್ರೂಪರ್ ಗಳು ಮೈದಾನದ ಮೇಲೆ ಹಾರಿ ನಂತರ ಎರಡು ತಂಡದ ನಾಯಕರಿಗೆ ಪಿಂಕ್ ಬಾಲ್‍ನ್ನು ಹಸ್ತಾಂತರ ಮಾಡುವ ಮೂಲಕ ಆರಂಭ ಮಾಡಲು ಯೋಚನೆ ಮಾಡಲಾಗಿದೆ. ಇದಾದ ನಂತರದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಡನ್ ಮೈದಾನದ ಬೆಲ್ ಹೊಡೆಯುವ ಪಂದ್ಯಕ್ಕೆ ಅಧಿಕೃತ ಆರಂಭ ನೀಡಲಿದ್ದಾರೆ.

ಪಂದ್ಯದ ಚಹಾ ವಿರಾಮದ ವೇಳೆ ಮಾಜಿ ನಾಯಕರನ್ನು ಓಪನ್ ವಾಹನದಲ್ಲಿ ಕುರಿಸಿ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ನಂತರ 40 ನಿಮಿಷಗಳ ವಿರಾಮದ ಸಮಯದಲ್ಲಿ, ‘ಫ್ಯಾಬುಲಸ್ ಫೈವ್’ ಎಂಬ ಹೆಸರಿನಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಒಳಗೊಂಡ ಟಾಕ್ ಶೋ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅವರು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಗೆಲುವಿನ ಬಗ್ಗೆ ಮಾತನಾಡಲಿದ್ದಾರೆ.

ಇದಾದ ನಂತರ ಸಚಿನ್. 2008ರ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಭಿನವ್ ಬಿಂದ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಮತ್ತು ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಗೆದ್ದ ಎಂಸಿ ಮೇರಿ ಕೋಮ್ ಸೇರಿದಂತೆ ಭಾರತೀಯ ಕ್ರೀಡಾ ತಾರೆಗಳನ್ನು ಸಿಎಬಿ ಸನ್ಮಾನಿಸಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೆಮೆಂಟೋಗಳನ್ನು ಗಣ್ಯರಿಗೆ ನೀಡಲಾಗುವುದು ಮತ್ತು ಅವರನ್ನು ಕ್ರೀಡಾಂಗಣದ ಸುತ್ತ ಗಾಲ್ಫ್ ಗಾಡಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಸಿಎಬಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.

ಈ ಕಾರ್ಯಕ್ರಮಗಳ ಜೊತೆಗೆ 2000 ದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ ಬಾಂಗ್ಲಾ ಆಟಗಾರರನ್ನು ಸನ್ಮಾನಿಸಲು ಸಿಎಬಿ ತೀರ್ಮಾನ ಮಾಡಿದೆ. ಈ ಪಂದ್ಯದಲ್ಲಿ ಸೌರವ್ ಗಂಗೂಲಿಯವರು ಟೆಸ್ಟ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು.

Click to comment

Leave a Reply

Your email address will not be published. Required fields are marked *