ಬೆಂಗಳೂರು: ಎಜ್ಯುಟೆಕ್ ಕಂಪನಿ ಬೈಜೂಸ್ (BYJU’s) ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್ (Raveendran) ಅವರ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶಾನಲಯ (Enforcement Directorate) ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೈಜು ರವೀಂದ್ರನ್ ಅವರ ಕಚೇರಿ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾಖಲೆಯಿಲ್ಲದ 5 ಕೋಟಿ ರೂ. ಹಣ ಜಪ್ತಿ
ಕಂಪನಿಯು 2011 ಮತ್ತು 2023 ರ ನಡುವೆ 28,000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಹೂಡಿಕೆಯನ್ನು (FDI) ಸ್ವೀಕರಿಸಿದೆ. ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಅದೇ ಅವಧಿಯಲ್ಲಿ ವಿದೇಶಿ ನ್ಯಾಯವ್ಯಾಪ್ತಿಗೆ ಸರಿಸುಮಾರು 9,754 ಕೋಟಿ ರೂ. ಕಳುಹಿಸಿದೆ.
ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಹಣ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ. ಲೆಕ್ಕ ತೋರಿಸಿದೆ. ಹೀಗಿದ್ದರೂ ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ.
ಖಾಸಗಿ ವ್ಯಕ್ತಿಗಳ ದೂರುಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ. ಈ ಹಿಂದೆ ಬೈಜು ರವೀಂದ್ರನ್‌ಗೆ ವಿಚಾರಣೆಗೆ ಹಾಜರಾಗುವಂತೆ ಹಲವಾರು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.