ಬೆಂಗಳೂರು/ಮಂಡ್ಯ: ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡ ಮನೆ ಮೇಲೆ ಎರಡು ದಿನಗಳ ಹಿಂದೆ ಇಡಿ ದಾಳಿ ನಡೆಸಿತ್ತು. ದಾಳಿ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿರುವುದಾಗಿ ಇಡಿ ಪ್ರಕಟಣೆ ಮೂಲಕ ತಿಳಿಸಿದೆ.
ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಸಹೋದರಿ ಎಂದು ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಐಶ್ವರ್ಯಗೌಡ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ತನಿಖೆಯ ಮುಂದುವರೆದ ಭಾಗವಾಗಿ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಮನೆ, ಕಚೇರಿ, ಶಾಸಕ ವಿನಯ್ ಕುಲಕರ್ಣಿ ಮನೆ ಸೇರಿ ಒಟ್ಟು 14 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದನ್ನೂ ಓದಿ: ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಯಕ್ಷಗಾನ ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು
ಗುರುವಾರ ಬೆಳಗ್ಗೆ ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಕಿರುಗಾವಲಿನಲ್ಲಿರುವ ಐಶ್ವರ್ಯಗೌಡ ನಿವಾಸಕ್ಕೆ ಐವರು ಇಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿತ್ತು. ಜೊತೆಗೆ ಭದ್ರತೆಗೆ ಸಿಆರ್‌ಪಿಎಫ್ (CRPF) ಯೋಧರನ್ನ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದರು. ಇಡಿ ದಾಳಿಯ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿದ್ದು, ಅಕ್ರಮ ಹಣ ವರ್ಗಾವಣೆ ಸಂಬಂಧ ಒಂದಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿರುವ ಬಗ್ಗೆ ಇಡಿ ಸ್ಪಷ್ಟಪಡಿಸಿದೆ.
ದಾಳಿ ಬಳಿಕ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯಗೌಡಳನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. 14 ದಿನ ಕಸ್ಟಡಿಗೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್, ವಿಮಾನಗಳ ಹಾರಾಟ ಸ್ಥಗಿತ