ನವದೆಹಲಿ: ನಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ ನಂತರ ಅದಕ್ಕೆ ಸಂಬಂಧಪಟ್ಟವರ 87 ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಎಲ್ಲ ದಾಳಿಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಈಗ ಜೋಡಿಸಲಾಗುತ್ತಿದೆ ಎಂದು ಸಂಸದ ಹಾಗೂ ಡಿಕೆಶಿ ಸಹೋದರ ಡಿಕೆ ಸುರೇಶ್ ಆರೋಪಿಸಿದ್ದಾರೆ.
ಶಿವಕುಮಾರ್ ಅವರನ್ನು ಇಡಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 82 ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ಅದಕ್ಕೂ ಡಿಕೆಶಿಗೂ ಸಂಬಂಧ ಇಲ್ಲ. ಆದರೂ ಎಲ್ಲವೂ ಶಿವಕುಮಾರ್ ಅವರದ್ದೇ ಎಂದು ತೋರಿಸುವ ಪ್ರಯತ್ನವನ್ನು ಇಡಿ ಮಾಡಿದೆ. ಯಾರ ಮನೆಯಲ್ಲಿ ಏನು ಸಿಕ್ಕಿದೆ ಅದಕ್ಕೆ ಅವರೇ ಜವಾಬ್ದಾರಿ. ನಾನು ಕಾನೂನು ಚೌಕಟ್ಟಿನಲ್ಲಿ ಇದ್ದೇನೆ ಎಂದು ಡಿಕೆಶಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದರು.
ನಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆಯವರ ಜೊತೆ ವ್ಯವಹಾರ ಮಾಡಿದ್ದಕ್ಕೆ ಎಲ್ಲದ್ದಕ್ಕೂ ಆದಾಯ ತೆರಿಗೆ ಕಟ್ಟಿದ್ದೇವೆ. ಅಧಿಕಾರಿಗಳು ಹೇಳುತ್ತಿರುವುದರಲ್ಲಿ ಎಲ್ಲವೂ ಸತ್ಯವಲ್ಲ ಎಂದು ಶಿವಕುಮಾರ್ ಕೋರ್ಟಿನಲ್ಲಿ ತಿಳಿಸಿದ್ದಾರೆ ಎಂದು ಸುರೇಶ್ ಮಾಹಿತಿ ನೀಡಿದರು.
ನಾಳೆಯೂ ಜಾಮೀನು ಅರ್ಜಿಯ ವಿಚಾರಣೆ ಮುಂದುವರಿಯಲಿದೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾವು ಜಾಮೀನಿನ ನಿರೀಕ್ಷೆಯಲ್ಲಿದ್ದೇವೆ. ಇಡಿ ಅಧಿಕಾರಿಗಳು ಸಾಕಷ್ಟು ಆರೋಪ ಮಾಡಿದ್ದಾರೆ. ನಾವೂ ಸಹ ದಾಖಲೆಗಳ ಮೂಲಕ ಉತ್ತರ ಕೊಟ್ಟಿದ್ದೇವೆ. 30 ವರ್ಷಗಳ ರಾಜಕಾರಣದಲ್ಲಿ ನಮ್ಮ ಮೇಲೆ ಯಾವುದೇ ಕಳಂಕ, ಆರೋಪ, ಕ್ರಿಮಿನಲ್ ಕೇಸ್ ಇಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಲಾಗಿದೆ. ಒಂದೆರಡು ದಿನ ತಡವಾಗಬಹುದು. ಆದರೆ ಜಾಮೀನು ಸಿಕ್ಕೇ ಸಿಗುತ್ತದೆ. ಡಿ.ಕೆ.ಶಿವಕುಮಾರ್ ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರು ದೆಹಲಿಗೆ ಬರುವುದು ಬೇಡ. ಪೂಜೆ, ಪುನಸ್ಕಾರ ಮಾಡುತ್ತಿರುವುದಕ್ಕೆ ನಾವು ಋಣಿಯಾಗಿದ್ದೇವೆ. ಖರ್ಚು ಮಾಡಿಕೊಂಡು ದೆಹಲಿಗೆ ಬರಬೇಡಿ. ಎಲ್ಲರೂ ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ್ ಅವರನ್ನು ಸಂಜೆ 4 ಗಂಟೆಯ ವೇಳೆಗೆ ಇಡಿ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರೆ ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದಿಸಿದರು.
ಎರಡು ಕಡೆಯ ವಾದ ಆಲಿಸಿದ ನ್ಯಾ. ಅಜಯ್ ಕುಮಾರ್ ಕುಹಾರ್ ಅ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ತಮ್ಮ ಆದೇಶದಲ್ಲಿ ಕೂಡಲೇ ಡಿಕೆಶಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಒಂದು ವೇಳೆ ಆರೋಗ್ಯ ಸರಿ ಇದ್ದು ಡಿಸ್ಚಾರ್ಜ್ ಮಾಡಲು ವೈದ್ಯರು ಅನುಮತಿ ನೀಡಿದರೆ ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಸೂಚಿಸಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು