ಬೆಂಗಳೂರು ಮಾದರಿಯಲ್ಲೇ ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ

Public TV
2 Min Read
DELHI PUBLIC SCHOOL

ನವದೆಹಲಿ: ಬೆಂಗಳೂರು ಮಾದರಿಯಲ್ಲೇ ದೆಹಲಿಯಲ್ಲೂ ಐವತ್ತಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat For Schools In Delhi) ಸಂದೇಶ ಬಂದಿದ್ದು, ಬುಧವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಆತಂಕದ ವಾತವಾರಣ ನಿರ್ಮಾಣ ಮಾಡಿತು. ಬೆದರಿಕೆ ಬರುತ್ತಿದ್ದಂತೆ ಮಕ್ಕಳನ್ನು ತರಗತಿಗಳಿಂದ ಹೊರ‌ ಕಳುಹಿಸಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿವೆ.

ದೆಹಲಿ ಪೊಲೀಸರ ಪ್ರಕಾರ, ದೆಹಲಿ ಪಬ್ಲಿಕ್ ಸ್ಕೂಲ್‌ನ (ಡಿಪಿಎಸ್) ದ್ವಾರಕಾ ಮತ್ತು ವಸಂತ್ ಕುಂಜ್ ಘಟಕಗಳು, ಪೂರ್ವ ಮಯೂರ್ ವಿಹಾರ್‌ನ ಮದರ್ ಮ್ಯಾರಿ ಸ್ಕೂಲ್, ಸಂಸ್ಕೃತಿ ಶಾಲೆ, ಪುಷ್ಪ್ ವಿಹಾರ್‌ನ ಅಮಿಟಿ ಸ್ಕೂಲ್ ಮತ್ತು ನೈಋತ್ಯ ದೆಹಲಿಯ ಡಿಎವಿ ಶಾಲೆಗೆ ಅರಂಭದಲ್ಲಿ ಬಾಂಬ್ ಬೆದರಿಕೆ ಬಂದಿತ್ತು.‌ ಬಳಿಕ ನೊಯ್ಡಾದಲ್ಲಿರುವ ಡಿಪಿಎಸ್ ಸೇರಿ ಪ್ರಮುಖ ಶಾಲೆಗಳನ್ನು ಗುರಿಯಾಗಿಸಿ ಇಮೇಲ್ ಮಾಡಲಾಗಿದೆ.

ದೂರು ಬರುತ್ತಿದ್ದಂತೆ ದೆಹಲಿ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ವಾಹನಗಳು ಮತ್ತು ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಸ್ಥಳಕ್ಕೆ ಧಾವಿಸಿದರು. ಶಾಲೆಯ ಆವರಣದಲ್ಲಿ ಸಂಪೂರ್ಣ ಶೋಧ ನಡೆಸಲಾಗಿತ್ತಾದರೂ ಯಾವುದೇ ಅನುಮಾನಾಸ್ಪದವಾಗಿ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಪಿಎಸ್ ನೋಯ್ಡಾದ ಪ್ರಾಂಶುಪಾಲರು‌ ಮಾತನಾಡಿ, ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಬೆದರಿಕೆ ಹಾಕುವ ಇಮೇಲ್ ಬಂದಿದೆ ಮುನ್ನೆಚ್ಚರಿಕೆ ಕ್ರಮವಾಗಿ ನಾವು ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಬೆದರಿಕೆ ಕಳುಹಿಸಲಾದ ಇಮೇಲ್‌ಗಳ ಐಪಿ ವಿಳಾಸಗಳು ಭಾರತದ ಹೊರಗಿನಿಂದ ಬಂದಿವೆ ಎಂದು ಸೂಚಿಸಿದೆ. ವಿಪಿಎನ್ ಮೂಲಕ ಐಪಿ ವಿಳಾಸವನ್ನು ಮರೆಮಾಚಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ, ಇನ್ನೂ ಯಾವುದೇ ಸಂಶಯಾಸ್ಪದ ಬೆಳವಣಿಗೆ ಪತ್ತೆಯಾಗಿಲ್ಲ, ಇಮೇಲ್ ಬಂದ ಐಪಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಇಂದು ಬೆಳಗ್ಗೆ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಆ ಆವರಣಗಳನ್ನು ದೆಹಲಿ ಪೊಲೀಸರು ಶೋಧಿಸುತ್ತಿದ್ದಾರೆ. ಇದುವರೆಗೆ ಯಾವುದೇ ಶಾಲೆಗಳಲ್ಲಿ ಅನುಮಾನಸ್ಪದ ವಸ್ತುಗಳು ಕಂಡುಬಂದಿಲ್ಲ. ನಾವು ಪೊಲೀಸರು ಮತ್ತು ಶಾಲೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪೋಷಕರು ಮತ್ತು ನಾಗರಿಕರು ಭಯಪಡಬೇಡಿ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಸೇರಿ ದೇಶದ 4 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ

ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ದೆಹಲಿ-ಎನ್‌ಸಿಆರ್‌ನ ಶಾಲೆಗಳಿಗೆ ಬಾಂಬ್ ಬೆದರಿಕೆಯ ಕುರಿತು ವಿವರವಾದ ವರದಿಯನ್ನು ಕೇಳಿದೆ. ಶಾಲಾ ಆವರಣದಲ್ಲಿ ಸಂಪೂರ್ಣ ಶೋಧನೆಯನ್ನು ಕೈಗೊಳ್ಳಲು, ಅಪರಾಧಿಗಳನ್ನು ಗುರುತಿಸಲು ಮತ್ತು ಯಾವುದೇ ಲೋಪವಾಗದಂತೆ ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ X ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Share This Article